ಬೆಂಗಳೂರು: ನಾವು ಇಷ್ಟು ದಿನ ವನವಾಸದಲ್ಲಿದ್ವಿ. ಈಗ ನಾವೆಲ್ಲಾ ಕತ್ತಲಿನಿಂದ ಬೆಳಕಿನೆಡೆಗೆ ಬರುವ ಸಂದರ್ಭ ಬಂದಿದೆ ಎಂದು ಬಿಎಸ್ ಯಡಿಯೂರಪ್ಪ ಶಾಸಕರ ಜೊತೆಗಿನ ಸಭೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಶಾಸಕರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ನಾವೆಲ್ಲಾ ಒಗ್ಗಟ್ಟಿನಿಂದ ಇರೋಣ. ಇನ್ನು ಎರಡು ನಮಗೆಲ್ಲ ದಿನಗಳ ಕಾಲ ಮಹತ್ತರವಾದ ದಿನ ಎಂದು ಬಿಎಸ್‍ವೈ ಹೇಳಿರುವುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎನ್ನುವುದು ಇದಕ್ಕೆ. ನಮಗೆ ಕಾಲ ಈಗ ಕೂಡಿ ಬಂದಿದೆ. ನಾಳೆ ಮತ್ತೆ ನಾವೆಲ್ಲಾ ಸಂಜೆ 5 ಘಂಟೆಗೆ ಸಭೆ ಸೇರೋಣ. ಬೆಳಿಗ್ಗೆ ಅಲ್ಪಮತಕ್ಕೆ ಕುಸಿದಿರುವ ಸರ್ಕಾರದ ವಿರುದ್ಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸಬೇಕು ಎಂದು ತಿಳಿಸಿದರು.
ಮಂಗಳವಾರ ಸ್ಪೀಕರ್ ರಮೇಶ್ ಕುಮಾರ್ ಬರಲೇಬೇಕು. ಸ್ಪೀಕರ್ ನಡೆಯನ್ನು ಸೂಕ್ಷ್ಮವಾಗಿ ಗಮನಿಸೋಣ. ಸದ್ಯದಲ್ಲೇ ನಿಮಗೆಲ್ಲ ಗುಡ್ ನ್ಯೂಸ್ ಕಾದಿದೆ. ರಾಜ್ಯಪಾಲರ ನಡೆಯನ್ನು ಕಾದು ನೋಡೋಣ ಎಂದು ಬಿಎಸ್‍ವೈ ಹೇಳಿದರು.
ಸಭೆ ಬಳಿಕ ಅರವಿಂದ ಲಿಂಬಾವಳಿ ಮಾತನಾಡಿ, 107 ಸ್ಥಾನಕ್ಕೆ ಈಗಾಗಲೇ ನಾವು ತಲುಪಿದ್ದೇವೆ. ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು. ಸ್ಪೀಕರ್ ಕ್ರಮಕ್ಕೂ ನಮಗೂ ಸಂಬಂಧವಿಲ್ಲ. ಸ್ಪೀಕರ್ ಕಾರ್ಯಕ್ಕೆ ಬಿಜೆಪಿ ಅಡ್ಡಿ ಪಡಿಸುವುದಿಲ್ಲ ಎಂದು ಹೇಳಿದರು.
13 ಶಾಸಕರ ರಾಜೀನಾಮೆಯಿಂದ ಮೈತ್ರಿ ಸಂಖ್ಯಾಬಲ 102ಕ್ಕೆ ಇಳಿಕೆಯಾಗಿದೆ. ಈಗಲಾದರೂ ದೋಸ್ತಿಗಳು ರಾಜೀನಾಮೆಯ ನಿರೀಕ್ಷೆ ಇದೆ. ಶಾಸಕರಾಗಿ ಆಯ್ಕೆಯಾದ ಆರು ತಿಂಗಳೊಳಗೆ ಸಹ ಸದಸ್ಯತ್ವ ಪಡೆದರೆ ಮಾತ್ರ ಕಾನೂನು ಅನ್ವಯ ಆಗುತ್ತದೆ. ಆದರೆ ಶಂಕರ್ ಆರು ತಿಂಗಳ ನಂತರ ಪಡೆದಿದ್ದಾರೆ. ಹಾಗಾಗಿ ಏನೂ ಸಮಸ್ಯೆ ಆಗುವುದಿಲ್ಲ ಎಂದು ಲಿಂಬಾವಳಿ ತಿಳಿಸಿದರು.
ಎಚ್‍ಎಎಲ್ ನಲ್ಲಿ ಕೈ ಕಾರ್ಯಕರ್ತರು, ಪೊಲೀಸರ ಜೊತೆ ಸಂತೋಷ್ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಗೇಶ್ ಮತ್ತು ಶಂಕರ್ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಅವರಿಬ್ಬರನ್ನೂ ಅಭಿನಂದನೆ ಹೇಳಲು ಸಂತೋಷ್ ಹೋಗಿದ್ದರು ಅಷ್ಟೇ ಎಂದು ಸಮರ್ಥಿಸಿಕೊಂಡರು.