– ಮೈಸೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಗದ್ದಲ ಎಬ್ಬಿಸಿದ ಕಾರ್ಯಕರ್ತರು
ಮೈಸೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರಿಂದಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕೆಂಬ ಕೂಗು ಕೇಳಿಬಂದಿದೆ.
ಮೈಸೂರಿನಲ್ಲಿಂದು (Mysuru) ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಬಣದಿಂದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ.ಸಿ ಪಾಟೀಲ್, ಹಾಲಪ್ಪ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಗೋಷ್ಠಿ ನಡುವೆ ʻಯತ್ನಾಳ್ ಉಚ್ಚಾಟಿಸಿ. ಬರೀ ಸುದ್ದಿಗೋಷ್ಠಿ ಮಾಡಿ ಏನೂ ಪ್ರಯೋಜನವಿಲ್ಲʼ ಎಂದು ಕಾರ್ಯಕರ್ತರು ಗದ್ದಲ ಎಬ್ಬಿಸಿದ್ದಾರೆ. ಯತ್ನಾಳ್ ವಿರುದ್ಧ ಧಿಕ್ಕಾರ ಕೂಗುತ್ತಾ, ಮೊದಲು ಅವನನ್ನ ಪಕ್ಷದಿಂದ ಕಿತ್ತೊಗೆಯಿರಿ ಎಂದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ವಕ್ಫ್ ವಿರೋಧಿ ಹೋರಾಟದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದು, ಡಿ.3ರಂದು ಕೋರ್ ಕಮಿಟಿ ಸಭೆ ನಿಗದಿ ಮಾಡಿದೆ. ಅಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ತರುಣ್ ಚುಗ್ ರಾಜ್ಯಕ್ಕೆ ಬರಲಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಹಾಗೂ ವಕ್ಫ್ ಅಭಿಯಾನ ಕೈಗೊಂಡಿರುವ ಯತ್ನಾಳ್ ಬಣದಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ತರುಣ್ ಚುಗ್ ವರದಿ ಆಧರಿಸಿ ದೆಹಲಿ ನಾಯಕರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಹೈಕಮಾಂಡ್ ಹೇಳಿದೆ.
ಇತ್ತೀಚೆಗೆ ವಿಜಯಪುರ ಸೇರಿದಂತೆ 5 ಜಿಲ್ಲೆಗಳಲ್ಲಿ ವಕ್ಫ್ ವಿರುದ್ಧ ಹೋರಾಟ ಹಮ್ಮಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ಹಿರಿಯ ನಾಯಕ ಡಿ.ವಿ ಸದಾನಂದಗೌಡ ಸೇರಿದಂತೆ ಹೈಕಮಾಂಡ್ ವಿರುದ್ಧ ಸರಣಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಎಂಟ್ರಿಯಾಗಿದ್ದು, ವಿಜಯೇಂದ್ರ ಪರ ಬ್ಯಾಟಿಂಗ್ ಮಾಡುತ್ತಾ, ಯತ್ನಾಳ್‌ರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಂತೆ ಯತ್ನಾಳ್ ವಿಚಾರವಾಗಿ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ಕಾರ್ಯಕರ್ತರು ಪಕ್ಷದಿಂದ ಉಚ್ಚಾಟಿಸುವಂತೆ ಒತ್ತಾಯಿಸಿದ್ದಾರೆ.