ನವದೆಹಲಿ: ಚುನಾವಣಾ ಆಯೋಗದ ಸಹಾಯ ಇಲ್ಲದೇ ಗೆಲುವು ಅವರಿಗೆ ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ವಾಗ್ದಾಳಿ ನಡೆಸಿದ್ದಾರೆ.
ವೋಟ್ ಚೋರ್ (Vote Chori), ಗದ್ದಿ ಚೋಡ್ ಹೆಸರಿನಲ್ಲಿ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ನಾಯಕರಿಂದ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಸೇರಿ ಹಲವು ರಾಷ್ಟ್ರೀಯ ನಾಯಕರು ಭಾಗಿಯಾಗಿದ್ದರು.
ಪ್ರಿಯಾಂಕಾ ಗಾಂಧಿ ಮಾತನಾಡಿ, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಲಾಯಿತು. ಕಾಂಗ್ರೆಸ್ ಬ್ಯಾಂಕ್ ಅಕೌಂಟ್ ಸೀಸ್ ಮಾಡಲಾಯಿತು. ನಮ್ಮ ನಾಯಕರ ಮೇಲೆ ಇ.ಡಿ, ಐಟಿ ದಾಳಿ ಮಾಡಿದರು. ಭ್ರಷ್ಟಾಚಾರದ ಆರೋಪ ಮಾಡಿದ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು. ವಾಷಿಂಗ್ ಮಷಿನ್‌ನಲ್ಲಿ ತೊಳೆದು ಶುದ್ಧ ಮಾಡಿದರು. ಮತಗಳವು, ಪರಿಷ್ಕರಣೆ ಮೇಲೆ ಚರ್ಚೆ ಆಗಬೇಕು ಎಂದು ನಾವು ಒತ್ತಾಯಿಸಿದೆವು. ಅವರು ವಂದೇ ಭಾರತ ಮೇಲೆ ಚರ್ಚೆ ಶುರು ಮಾಡಿದರು. ದೇಶ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರ ಬಗ್ಗೆ ಚರ್ಚೆ ಮಾಡುವ ಧೈರ್ಯ ಇಲ್ಲ. ಯಾಕೆ ಧೈರ್ಯ ಇಲ್ಲ, ಇವರು ಅಸಲಿ ಚುನಾವಣೆ ಎದುರಿಸಬೇಕು. ಸರಿಯಾಗಿ ಚುನಾವಣೆ ನಡೆದರೆ ಬಿಜೆಪಿ ಒಂದು ಸ್ಥಾನ ಗೆಲುವುದಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಕಹಳೆ – ಸಿದ್ದರಾಮಯ್ಯ, ಡಿಕೆಶಿ, ಸಚಿವರು, ಶಾಸಕರು ಭಾಗಿ
ಬಿಹಾರದಲ್ಲಿ, ಕರ್ನಾಟಕದಲ್ಲಿ, ಹರಿಯಾಣದಲ್ಲಿ ಮತಗಳವು ಮಾಡಿ ಗೆಲುವು ಸಾಧಿಸಿದೆ. ಚುನಾವಣೆ ಮುನ್ನ ಹತ್ತು ಸಾವಿರ ಹಣ ಮಹಿಳೆಯರ ಖಾತೆಗೆ ಹಾಕಿದ್ದಾರೆ ಅವರನ್ನು ತಡೆಯುವರಿಲ್ಲ. ಸಂಸತ್‌ನಲ್ಲಿ ಆ ನಾಯಕರನ್ನು ನೋಡುತ್ತೇವೆ. ಅವರಲ್ಲಿ ಆತ್ಮ ವಿಶ್ವಾಸ ಕುಗ್ಗಿ ಹೋಗಿದೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ, ತಲೆ ತಗ್ಗಿಸಿಕೊಂಡು ಹೋಗ್ತಾರೆ. ಚುನಾವಣಾ ಆಯೋಗದ ಸಹಾಯ ಇಲ್ಲದೇ ಗೆಲುವು ಅವರಿಗೆ (ಬಿಜೆಪಿ) ಸಾಧ್ಯವಿಲ್ಲ. ಆಯೋಗದ ಮೂವರು ಅಧಿಕಾರಿಗಳ ಹೆಸರು ನೆನಪಿಡಿ, ಅವರು ಪ್ರಜಾಪ್ರಭುತ್ವದ ಮೇಲೆ ಯುದ್ಧ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಕುಗ್ಗಿಸಲಾಗಿದೆ. ಬಿಹಾರದಲ್ಲಿ ಎಸ್‌ಐಆರ್ ವಿರುದ್ಧ ಯಾತ್ರೆ ನಡೆಸಿದರು. ಈಗ ಉತ್ತರ ಪ್ರದೇಶದಲ್ಲಿ ಮತಗಳವು ಶುರುವಾಗಿದೆ. ಚುನಾವಣಾ ಆಯುಕ್ತರು ದೇಶದ ಜನರಿಗೆ ಉತ್ತರ ಕೊಡಬೇಕು. ನಮ್ಮ ಮತವನ್ನು ಹೇಗೆ ಕಳ್ಳತನ ಮಾಡಲಾಯಿತು. ರೂಪಾಯಿ ಮೌಲ್ಯ 90 ರೂಪಾಯಿಗೆ ಕುಸಿದಿದೆ. ಯಾರು ಇದರ ಬಗ್ಗೆ ಮಾತನಾಡುತ್ತಿಲ್ಲ. ವಿದೇಶಾಂಗ ನೀತಿ ನಾಶವಾಗಿದೆ. ಕಷ್ಟದಲ್ಲಿ ಯಾವ ದೇಶವೂ ಭಾರತದ ಪರವಾಗಿ ನಿಲ್ಲಲಿಲ್ಲ. ಅಂಬಾನಿ, ಅದಾನಿ ಕೈ ಹಿಡಿದು ಮೋದಿ ಹೊರಟಿದ್ದಾರೆ. ಬೆಟ್ಟಿಂಗ್ ಆ್ಯಪ್ ಎಲ್ಲಿಂದ ನಡೆಯುತ್ತಿದೆ. ಪ್ರಧಾನಿ ಮೋದಿ ಕಚೇರಿಯಲ್ಲಿರುವ ಒಬ್ಬ ವ್ಯಕ್ತಿಯಿಂದ ನಡೆಯುತ್ತಿದೆ. ಈ ಸರ್ಕಾರ ಮಹಿಳೆಯರ ಪರವಾಗಿ ಮಾತನಾಡಲಿಲ್ಲ. ನಿಮ್ಮ ಗಮನ ಬೇರೆಡೆ ಸೆಳೆಯಲು ಹೊಸ ಹೊಸ ವಿಷಯ ತರಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಯ್ತಪ್ಪ ನಾವು ಗ್ಯಾರಂಟಿ ಕೊಡೋದಿಲ್ಲ, ನಾಳೆಯಿಂದ ನಿಲ್ಸಿ ಬಿಡೋಣ: ಗ್ಯಾರಂಟಿ ಟೀಕಿಸುವವರಿಗೆ ಪರಮೇಶ್ವರ್ ಟಾಂಗ್
ಮತದ ಮೌಲ್ಯ ಏನು ಎಂದು ತಿಳಿದುಕೊಳ್ಳಬೇಕು. ಸ್ವಾತಂತ್ರ‍್ಯ ಭಾರತದಲ್ಲಿ ನೆಹರೂ ಬೇರೆ ಕಡೆ ಭೇಟಿ ನೀಡಿದಾಗ ಭಾರತ ಮಾತಾ ಕೀ ಜೈ ಎನ್ನುತ್ತಿದ್ದರು. ಅದಕ್ಕೆ ಭಾರತ ಅಂದರೇನು ಎಂದು ಕೇಳಿದರು. ದೇಶದ ನೈಸರ್ಗಿಕ ಸಂಪತ್ತು, ದೇಶದ ಜನರು ಭಾರತ ಮಾತಾ ಎಂದು ನೆಹರೂ ಹೇಳಿದ್ದರು. ಇಂತಹ ಭಾವನೆ ನಮ್ಮ ಸಂವಿಧಾನವಾಗಿದೆ. ಈ ಸಂವಿಧಾನ ನಮಗೆ ಮತದಾನದ ಹಕ್ಕು ನೀಡಿದೆ. ಪ್ರಜಾಪ್ರಭುತ್ವ ಪ್ರಬಲವಾಗಿಡಲು ಮತದಾನ ಹಕ್ಕು ನೀಡಲಾಯಿತು. ಸಾಂವಿಧಾನಿಕ ಸಂಸ್ಥೆಗಳು, ವಿಪಕ್ಷಗಳು ಸಂವಿಧಾನದ ಭಾಗ. ಜನರ ಹಿತಕ್ಕಾಗಿ ಇವುಗಳನ್ನು ರಚಿಸಲಾಯಿತು. ಆದರೆ ಇಂತಹ ಸಂಸ್ಥೆಗಳನ್ನು ಹಾಳು ಮಾಡಲಾಗುತ್ತಿದೆ. ಇದು ದೇಶದ ಪ್ರತಿಯೊಬ್ಬ ಜನರ ಮೇಲಿನ ದಾಳಿಯಾಗಿದೆ. ನ್ಯಾಯಾಂಗ ಮತ್ತು ಮಾಧ್ಯಮದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.


