ಬೆಂಗಳೂರು: ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅನರ್ಹರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕರು ಸಹ ಇದಕ್ಕೆ ಪೂರಕವಾದ ಹೇಳಿಕೆಯನ್ನು ನೀಡುತ್ತಿದ್ದಾರೆ.
ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ, ಅನರ್ಹ ಶಾಸಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
Advertisement
Advertisement
ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ನಿರಾಳರಾಗಿದ್ದೇವೆ. ಅನರ್ಹರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಲಾಗುವುದು. ಮತ್ತೆ ಶಾಸಕರಾಗಿ ಆಯ್ಕೆಯಾಗಲು ಯಾವ ಅಡೆತಡೆಯೂ ಇಲ್ಲ. ಈಗ ಅವರಿಗೆ ಮಂತ್ರಿಯಾಗಲು ಅವಕಾಶ ಇಲ್ಲ. ಅದಕ್ಕಿಂತ ಮುಖ್ಯವಾಗಿ ಈಗ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಿದೆ ಎಂದರು.
Advertisement
ಮಾತನಾಡಿರುವುದರ ಪ್ರಕಾರವೇ ನಡೆದುಕೊಳ್ಳುತ್ತೇವೆ. ನಮಗೆ ಸಹಾಯ ಮಾಡಿದವರನ್ನು ನಾವು ಕೈಬಿಡುವದಿಲ್ಲ. ಅನರ್ಹರು ಬಿಜೆಪಿ ಅಭ್ಯರ್ಥಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ಅನರ್ಹ ಶಾಸಕರ ಪರವಾಗಿದ್ದೇವೆ ಎಂದು ಭರವಸೆ ನೀಡಿದರು.
Advertisement
ಸಂಜೆ ಕೋರ್ ಕಮಿಟಿ ಸಭೆ ಇದೆ, ಯಾರ್ಯಾರು ಎಲ್ಲೆಲ್ಲಿ ಅಭ್ಯರ್ಥಿಗಳಾಗಬೇಕು ಎಂಬುದು ನಿರ್ಧಾರವಾಗಲಿದೆ. ಯಡಿಯೂರಪ್ಪನವರ ಸರ್ಕಾರ ಇರಬೇಕು ಎಂಬುದು ಎಲ್ಲರ ಬಯಕೆಯಾಗಿದೆ. ಕಾಂಗ್ರೆಸ್‍ನಲ್ಲಿಯೂ ಸಹ ಭಿನ್ನಮತ ಸ್ಫೋಟವಾಗಿದೆ. ಜೆಡಿಎಸ್ ಇನ್ನೂ ಚುನಾವಣೆ ತಯಾರಿ ನಡೆಸಿಲ್ಲ. ವಿರೋಧ ಪಕ್ಷಗಳಲ್ಲಿ ಗೊಂದಲವಿದೆ. ಹೀಗಾಗಿ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶರತ್ ವಿರುದ್ಧ ಗರಂ!
ನಮ್ಮ ಪಕ್ಷದವರು ಯಾರೇ ಆಗಲಿ ಅನರ್ಹ ಶಾಸಕರು ಸ್ಪರ್ಧಿಸುವುದನ್ನು ತಡೆಯುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅನರ್ಹರಿಗೆ ಮೋಸವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಶರತ್ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ. ನಾನೂ ಸಹ ಈ ಕುರಿತು ಅವರ ಬಳಿ ಮಾತನಾಡುತ್ತೇನೆ. ಅಭ್ಯರ್ಥಿ ಘೋಷಣೆಗೂ ಮೊದಲು ಇಂತಹ ಗೊಂದಲಗಳು ಸಹಜ. ಆದರೆ ಪಕ್ಷ ಒಂದು ಬಾರಿ ಅಭ್ಯರ್ಥಿಗಳನ್ನು ಘೋಷಿಸಿದರೆ ಯಾರೂ ಅದರ ವಿರುದ್ಧ ಮಾತನಾಡಬಾರದು. ಈ ರೀತಿಯ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದರು.