ಕೇಂದ್ರದಲ್ಲಿ ಬಿಜೆಪಿ ಇನ್ನೂ 50 ವರ್ಷ ಅಧಿಕಾರದಲ್ಲಿರಲಿದೆ: ಜಮಾಲ್ ಸಿದ್ದಿಕಿ

Public TV
3 Min Read
Jamal Siddiqui 2

ಬೆಂಗಳೂರು: ಬಿಜೆಪಿ ಸರ್ವಸ್ಪರ್ಶಿ ಸರ್ವವ್ಯಾಪಿ ಮತ್ತು ಸರ್ವರ ಅಭಿವೃದ್ಧಿಗೆ ಯತ್ನಿಸುವ ಪಕ್ಷ ಎಂದು ತಿಳಿಸುವ ಮೂಲಕ ಅದು ಅಲ್ಪಸಂಖ್ಯಾತರ ವಿರೋಧಿ ಎಂಬ ತಪ್ಪು ಮಾಹಿತಿಯನ್ನು ದೂರಮಾಡಲು ಮೋರ್ಚಾ ಯತ್ನಿಸಬೇಕಿದೆ. ಕೇಂದ್ರ ಸರ್ಕಾರ ಮಾಡಿದ ಉತ್ತಮ ಕಾರ್ಯಗಳಿಂದಾಗಿ ಬಿಜೆಪಿ ಇನ್ನೂ 50 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ಅಭಿಪ್ರಾಯಪಟ್ಟಿದ್ದಾರೆ.

Jamal Siddiqui 1

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಬ್ ಕಾ ವಿಕಾಸ್ ಚಿಂತನೆಯನ್ನು ಸಾಕಾರಗೊಳಿಸಬೇಕಿದೆ. ಜೊತೆಗೆ ಕೇಂದ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳ ಕುರಿತು ನಾವು ಜನರಿಗೆ ತಿಳಿಸುವ ಅಗತ್ಯವಿದೆ ಎಂದರು. ಇದನ್ನೂ ಓದಿ: RSS ಇರೋದ್ರಿಂದ ಸಿದ್ದರಾಮಯ್ಯನ ಬೇಳೆ ಬೇಯುತ್ತಿಲ್ಲ: ರಘುಪತಿ ಭಟ್

Jamal Siddiqui 3

ಬಿಜೆಪಿ ದೇಶದ ಮಾತ್ರವಲ್ಲ, ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಬಿಜೆಪಿಯಲ್ಲಿ ವಿಶ್ವಕ್ಕೇ ನೇತೃತ್ವ ನೀಡಬಲ್ಲ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಇದೆ. ಈ ಪಕ್ಷದಡಿ ಮೋರ್ಚಾದ ಪದಾಧಿಕಾರಿಗಳಾದ ನಾವೆಲ್ಲರೂ ಧನ್ಯತಾ ಭಾವವನ್ನು ಹೊಂದಿರಬೇಕು. ಮೋದಿಯವರ ಸರ್ಕಾರ ಕಳೆದ 8 ವರ್ಷಗಳಲ್ಲಿ ಬಡವರ ಸೇವೆ, ಸುಶಾಸನ ಮತ್ತು ಬಡವರ ಏಳಿಗೆಗಾಗಿ ನಿರಂತರ ಕಾರ್ಯನಿರ್ವಹಿಸಿದೆ. ಭ್ರಷ್ಟಾಚಾರರಹಿತವಾಗಿ ಅದು ಕೆಲಸ ಮಾಡಿದೆ. ಆದರೆ, ವಿರೋಧ ಪಕ್ಷದವರು ಕುರ್ಚಿಗಾಗಿ ಏನನ್ನು ಮಾಡಲೂ ಸಿದ್ಧರಿದ್ದಾರೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರನ್ನು ಸಮಾನವಾಗಿ ನೋಡುವ ಬಿಜೆಪಿ ಸರ್ಕಾರದ್ದು. ಕ್ರಿಶ್ಚಿಯನ್, ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿ ಇರುವ ಕಡೆ ವಿದ್ಯುತ್, ಮನೆ ಮತ್ತು ರಸ್ತೆ ಸಂಪರ್ಕ ನೀಡುವುದಿಲ್ಲ ಎಂಬ ಮಾತು ಯಾವತ್ತೂ ಬಂದಿಲ್ಲ ಎಂದು ಅವರು ನುಡಿದರು. ಇದನ್ನೂ ಓದಿ: ಎಚ್‍ಡಿಕೆಗೆ ಪಿಎಸ್‍ಐ ಅಭ್ಯರ್ಥಿಗಳಿಂದ ಮುತ್ತಿಗೆ ಯತ್ನ- ಅಡ್ಡ ಬಂದವನಿಗೆ ಥಳಿಸಿದ ಗನ್‍ಮ್ಯಾನ್

ರೈತರಿಗೆ ನೆರವಾಗುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಯಾವುದೇ ಯೋಜನೆಗಳಲ್ಲಿ ಭೇದಭಾವ ಅಲ್ಲಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಘೋಷಣೆಯಂತೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ನಾವು ಸಮಾಜದ ಎಲ್ಲರಿಗೂ ಯೋಜನೆಗಳ ಪ್ರಯೋಜನ ತಲುಪುವಂತೆ ನೋಡಿಕೊಳ್ಳಬೇಕು. ಸಮಾಜದ ಎಲ್ಲರಿಗೆ, ಎಲ್ಲ ವರ್ಗದವರಿಗೆ ಮತ್ತು ಎಲ್ಲ ಧರ್ಮದವರಿಗೆ ಒಳಿತನ್ನು ಉಂಟು ಮಾಡುವ ಚಿಂತನೆಯನ್ನು ಬಿಜೆಪಿ ಅನುಷ್ಠಾನಕ್ಕೆ ತರುತ್ತಿದೆ. ದೇಶದೆಲ್ಲೆಡೆ ಅಲ್ಪಸಂಖ್ಯಾತರ ಮೋರ್ಚಾವು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ರಾಜ್ಯ ಅಧ್ಯಕ್ಷ ಸೈಯದ್ ಸಲಾಂ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಅವರು ರಾಷ್ಟ್ರೀಯ ಅಧ್ಯಕ್ಷ ಆಗಲಿ ಎಂದು ಆಶಿಸುತ್ತೇನೆ. ಬಿಜೆಪಿ ಇಂಥ ಕನಸುಗಳಿಗೆ ಅವಕಾಶ ಮಾಡಿಕೊಡುತ್ತದೆ. ಅದು ನನಸಾಗಲೂ ಅವಕಾಶವಿದೆ. ಆದರೆ, ಕುಟುಂಬ ರಾಜಕಾರಣ ಮಾಡುವ ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿ ಇಂಥ ಕನಸು ಕಾಣಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಮೋರ್ಚಾವನ್ನು ಹೆಚ್ಚು ಸದೃಢಗೊಳಿಸಲು ಪೂರ್ವಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳೂ ದುಡಿದಿದ್ದಾರೆ. ಜನಸಂಘದ ಪದಾಧಿಕಾರಿಗಳನ್ನು ಹಿಂದೆ ತಮಾಷೆ ಮಾಡುವ ದಿನಗಳಿದ್ದವು. ಆದರೆ, ಈಗ ಕಾಲ ಬದಲಾಗಿದೆ. ಪಕ್ಷವನ್ನು ಬಲಪಡಿಸಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಬೇಕು. ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮವನ್ನು ಪ್ರಚಾರಕಾರ್ಯಕ್ಕೆ ಬಳಸಿಕೊಳ್ಳಿ. ಮತದಾರರನ್ನು ತಲುಪಲು ಮತ್ತು ಮುಖಂಡರಿಗೆ ವಿಷಯ ತಿಳಿಸಲು ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆ ಅತ್ಯಗತ್ಯ. ಅಭಿವೃದ್ಧಿ ವಿಷಯದಲ್ಲಿ ಬಿಜೆಪಿಗೆ ಜಾತಿ, ಮತ ಮತ್ತು ಧರ್ಮದ ಭೇದವಿಲ್ಲ. ಈ ವಿಚಾರದಲ್ಲಿ ಯಾರಾದರೂ ತಪ್ಪು ಮಾಹಿತಿ ನೀಡಿದರೆ ಅವರಿಗೆ ಸೂಕ್ತ ಉತ್ತರ ಕೊಡಬೇಕು. ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಅಬ್ದುಲ್ ಸಲಾಂ, ನೋಬಲ್ ಮ್ಯಾಥ್ಯೂ, ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅನಿಶ್, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಅಧ್ಯಕ್ಷ ಸೈಯದ್ ಸಲಾಂ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಮುಕ್ತಾರ್ ಪಠಾಣ್, ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಾಂತಕುಮಾರ್, ಕರ್ನಾಟಕ ರಾಜ್ಯ ಹಜ್ ಮಂಡಳಿ ಅಧ್ಯಕ್ಷ ರವೂಫುದ್ದೀನ್ ಕಛೇರಿವಾಲಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *