ಹಾವೇರಿ: ಬಜೆಟ್ ಮಂಡನೆಗೂ ಮುಂಚೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕಳೆದ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ ಹಣವೆಷ್ಟು, ಖರ್ಚಾಗಿರುವ ಹಣವೆಷ್ಟು ಎನ್ನುವುದನ್ನು ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ ಎಲ್ಲಿ ವಿಫಲವಾಗಿದೆ ಎನ್ನುವುದನ್ನು ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಘಟಕ ಸಿದ್ಧರಾಗಬೇಕು ಎಂದು ಸೂಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಹಾವೇರಿಯಲ್ಲಿ (Haveri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನ ಆಂತರಿಕ ವಿಚಾರದಲ್ಲಿ ಯಾವುದೇ ರೀತಿಯ ಹೇಳಿಕೆ ನೀಡಲು ಸಿದ್ಧನಿಲ್ಲ. ಜನರು ಇವರಿಗೆ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ. ಅದನ್ನು ಮಾಡಲು ಇವರಿಗೆ ಸಮಯವಿಲ್ಲ. ಯಾಕೆಂದರೆ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಇಲಾಖೆ ಹಾಗೂ ನಿಗಮಗಳ ಅಧಿಕಾರಿಗಳ ಸಭೆ ನಡೆಸಿದರು. ಈ ವರ್ಷ ಹಿಂದುಳಿದ ವರ್ಗಗಳ ನಿಗಮಗಳಿಗೆ ಎಷ್ಟು ಹಣ ಖರ್ಚಾಗಿದೆ ಎಂದು ಸಿಎಂ ಮಾಡಿರುವ ಸಭೆಯಲ್ಲಿ ಚರ್ಚೆಯೇ ಆಗಲಿಲ್ಲ. ಹಿಂದುಳಿದ ವರ್ಗಗಳ ನಾಯಕರು ಸಿಎಂರನ್ನು ಕೇಳಬೇಕಿತ್ತು. ಅದನ್ನು ವಿರೋಧ ಪಕ್ಷವಾಗಿ ಬಿಜೆಪಿ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಸಿಎಂ ಕೆಸಿಆರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ವ್ಯಕ್ತಿ ಶವವಾಗಿ ಪತ್ತೆ
ವಿವಿ ಮುಚ್ಚುವುದು ಅನ್ಯಾಯ:
ರಾಜ್ಯದಲ್ಲಿ ಹೊಸ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದು ದೊಡ್ಡ ಅನ್ಯಾಯ. ಇವತ್ತು ಡಿಜಿಟಲ್ ವೇದಿಕೆ ಬಂದ ಮೇಲೆ ಹಲವಾರು ರೀತಿಯ ಅನುಕೂಲ ಇದೆ. ಬಹಳ ದೊಡ್ಡ ಕ್ಯಾಂಪಸ್ ಬೇಕಿಲ್ಲ. ಆತ್ಯಂತ ಕಡಿಮೆ ವೆಚ್ಚದಲ್ಲಿ ವಿವಿ ನಡೆಸಬಹುದು ಎನ್ನುವುದನ್ನು ಕಳೆದ ಎರಡು ವರ್ಷಗಳಲ್ಲಿ ಎಂಟು ವಿವಿಗಳು ನಡೆಸಿ ತೋರಿಸಿವೆ. ಹಳೆಯ ವಿವಿಗಳಿಗೆ ರಾಜ್ಯ ಸರ್ಕಾರ ನೂರಾರು ಕೋಟಿ ರೂ. ನೀಡುತ್ತದೆ. ಆದರೆ ಅಲ್ಲಿ ಸಂಬಳ ಕೊಡಲು ಸಾಧ್ಯವಾಗಿಲ್ಲ. ಪಿಂಚಣಿ ಕೊಡಲು ಆಗುತ್ತಿಲ್ಲ. ಪ್ರಾಧ್ಯಾಪಕರಿರುವಲ್ಲಿ ವಿದ್ಯಾರ್ಥಿಗಳಿಲ್ಲ. ಕೇವಲ ಭ್ರಷ್ಟಾಚಾರದ ಕೂಪಗಳಾಗಿವೆ. ಕಳೆದ ಎರಡು ವರ್ಷಗಳಲ್ಲಿ ಹೊಸ ವಿವಿಗಳು ಉತ್ತಮ ಕೆಲಸ ಮಾಡಿವೆ. ಕೇವಲ 20 ದಿನದಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಅನೇಕ ವಿದ್ಯಾರ್ಥಿನಿಯರು ದೂರದ ಊರುಗಳಿಗೆ ಉನ್ನತ ಶಿಕ್ಷಣ ಕಲಿಯಲು ಹೋಗಲು ಆಗುತ್ತಿಲ್ಲ. ಇಲ್ಲಿಯೇ ವಿವಿ ಇರುವುದರಿಂದ ಅನೇಕ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣ ಕಲಿಸಲು ಕಳುಹಿಸುತ್ತಿದ್ದಾರೆ. ಆದರೆ ಬಿಜೆಪಿ ಅವಧಿಯಲ್ಲಿ ವಿವಿಗಳು ಸ್ಥಾಪನೆ ಆಗಿವೆ ಎನ್ನುವ ಒಂದೇ ಒಂದು ಕಾರಣಕ್ಕೆ ಅವುಗಳನ್ನು ಮುಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್; ಅಕ್ರಮವಾಗಿ 14 ನಿವೇಶನ ಬಂದಿಲ್ಲ ಎಂದಾದರೆ, ಅದನ್ನು ಹಿಂತಿರುಗಿಸಿದ್ದೇಕೆ? – ವಿಜಯೇಂದ್ರ
ಕ್ಲೀನ್‌ಚಿಟ್ ನಿರೀಕ್ಷಿತ:
ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿರುವುದು ನಿರೀಕ್ಷಿತ, ಲೋಕಾಯುಕ್ತ ಸಿಎಂ ವಿರುದ್ಧ ಮೃದು ಧೋರಣೆ ತಾಳಿದೆ. ಲೋಕಾಯುಕ್ತ ಸ್ವಾಯತ್ತ ಸಂಸ್ಥೆ ಇದ್ದರೂ ರಾಜ್ಯ ಸರ್ಕಾರದ ಅಡಿಯಲ್ಲಿ ಇರುವ ಪೊಲೀಸರೇ ತನಿಖೆ ಮಾಡುವುದರಿಂದ ಅವರು ಅದೇ ರೀತಿಯ ವರದಿ ಕೊಡುತ್ತಾರೆ. ಅದಕ್ಕಾಗಿಯೇ ಕೇಂದ್ರದ ಸ್ನಾಯತ್ತ ಸಂಸ್ಥೆಯಿಂದ ತನಿಖೆ ಆಗಬೇಕೆಂಬ ಬೇಡಿಕೆ ಇದೆ. ಇಡಿ ತನಿಖೆಯ ಬಗ್ಗೆ ಕೋರ್ಟ್ ತೀರ್ಮಾನ ಮಾಡಬೇಕಿದೆ. ಈ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಕೂಡ ಕೋರ್ಟ್‌ನಲ್ಲಿ ಪರಿಶೀಲನೆ ಆಗಲಿದೆ. ಅಂತಿಮವಾಗಿ ಸತ್ಯ ಹೊರ ಬರಲಿದೆ ಎಂದು ಹೇಳಿದರು. ಇದನ್ನೂ ಓದಿ: ಶಮಿಗೆ 5 ವಿಕೆಟ್; ಬಾಂಗ್ಲಾ ಆಲೌಟ್ – ಟೀಂ ಇಂಡಿಯಾಗೆ 229 ರನ್‌ಗಳ ಗುರಿ
ಸಿದ್ದರಾಮಯ್ಯ ಸೇರಿದಂತೆ ಹಲವಾರು ಜನರು ಸೈಟುಗಳನ್ನು ಪಡೆದಿರುವುದರಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿರುವುದು ಸಿದ್ಧವಾಗಿದೆ. ಎಲ್ಲವೂ ಸರಿಯಾಗಿದ್ದರೆ ಮುಖ್ಯಮಂತ್ರಿಗಳು ಸೈಟ್‌ಗಳನ್ನು ಯಾಕೆ ವಾಪಸ್ ಕೊಟ್ಟರು ಎನ್ನುವುದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಯತ್ನಾಳ್ ಮಾತಿನ ಪಟ್ಟಿ ಮಾಡಿಕೊಳ್ತಿದ್ದೀನಿ, ಒಂದೇ ಸಲ ಉತ್ತರ ಕೊಡ್ತೀನಿ: ವಿಜಯೇಂದ್ರ
ಗೃಹ ಲಕ್ಷ್ಮಿಗೆ ಗ್ರಹಣ:
ಯಾವುದೇ ಯೋಜನೆಯನ್ನು ಯೋಜನಾಬದ್ಧವಾಗಿ ರೂಪಿಸಿ ಹಣ ಒದಗಿಸಬೇಕು. ಪೂರ್ವ ತಯಾರಿ ಇಲ್ಲದೇ ರಾಜಕೀಯ ಲಾಭಕ್ಕಾಗಿ ಮಾಡಿರುವ ಗ್ಯಾರಂಟಿ ಯೋಜನೆಗಳು ಕುಂಟುವುದು ಸಹಜ. ಗೃಹಲಕ್ಷ್ಮಿ ಯೋಜನೆಗೆ ಅತಿ ಹೆಚ್ಚು ಖರ್ಚಾಗುತ್ತಿದೆ. ಅದನ್ನು ಎರಡು ಮೂರು ತಿಂಗಳು ನಿಲ್ಲಿಸಿದರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಗೆ ಗ್ರಹಣ ಹಿಡಿದಿದೆ. ಇದು ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಮತದಾನದ ಹಿಂದಿನ ದಿನ ಮತದಾರರಿಗೆ ನೀಡಿ ಅಧಿಕೃತ ಲಂಚಕೊಡುವ ವ್ಯವಸ್ಥೆಯಾಗುತ್ತಿದೆ. ಇದನ್ನು ನೋಡಿಯೂ ಚುನಾವಣಾ ಆಯೋಗವೂ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಇ.ಡಿ ವಿಚಾರಣೆಯಿಂದ ಸಿಎಂ ಪತ್ನಿಗೆ ರಿಲೀಫ್ – ಪಾರ್ವತಿ, ಸಚಿವ ಬೈರತಿಗೆ ಮಧ್ಯಂತರ ರಕ್ಷಣೆ ಮುಂದುವರಿಕೆ
ರಾಜ್ಯ ಸರ್ಕಾರ ಮಾತು ಕೊಟ್ಟಂತೆ ಗ್ಯಾರಂಟಿ ಹಣ ಬಿಡುಗಡೆ ಮಾಡಬೇಕು. ಇಂಧನ ಸಚಿವ ಜಾರ್ಜ್ ಇದೇನು ಸಂಬಳವೇ ಎಂದು ಹೇಳಿದ್ದಾರೆ. ಇದು ಸಂಬಳ ಅಲ್ಲ ಗೌರವ ಧನ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ದರೆ, ಗೌರವ ಧನವನ್ನು ಬಿಡುಗಡೆ ಮಾಡಿ. ಇಲ್ಲದಿದ್ದರೆ ಹೆಣ್ಣುಮಕ್ಕಳಿಗೆ ಗೌರವ ನೀಡಿಲ್ಲ ಎಂದು ಅರ್ಥ. ಇಲ್ಲಿ ಯಾರೂ ಭಿಕ್ಷೆ ಬೇಡಲು ನಿಂತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಿಕನ್ ಖರೀದಿಗೆ ಬಂದಿದ್ದ ದೈತ್ಯ ವಿದೇಶಿ ಪ್ರಜೆ ಕೊಲೆ – ಅನುಮಾನಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!