ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು, ಎಲ್ಲ ವರ್ಗದಲ್ಲೂ ಬಡವರಿದ್ದಾರೆ. ಹಿಂದೂಗಳಲ್ಲೂ ಕೂಡ ಬಡವರಿದ್ದಾರೆ. ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ಕೊಡುವುದಾದರೆ ಹಿಂದೂಗಳೇನು ಅಪರಾಧ ಮಾಡಿದ್ದಾರೆ? ಹಿಂದೂಗಳಲ್ಲಿ ಹಾಗಿದ್ದರೆ ಬಡವರಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ಶೇ.4 ಮೀಸಲಾತಿ ಕುರಿತ ಮಸೂದೆಯನ್ನು ಸದನದಲ್ಲಿ ತಂದಾಗ ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ, ಪ್ರತಿಭಟನೆ ಮಾಡುತ್ತೇವೆ. ಇದನ್ನು ಅನುಷ್ಠಾನಗೊಳಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಡಿ.ಕೆ.ಶಿವಕುಮಾರ್ ಅವರು ಹಿರಿಯರಿದ್ದಾರೆ. ಕುವೆಂಪು ಅವರ ನಾಡಗೀತೆಯನ್ನು ನೆನಪಿಸಿಕೊಂಡಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟದ ನೆನಪನ್ನು ಅವರು ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ವಿಷಬೀಜವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಬಯಸುವುದಾಗಿ ವಿಜಯೇಂದ್ರ ಹೇಳಿದರು.
ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮಾಡಲು ಹೊರಟಿದ್ದು, ಇದನ್ನು ಬಿಜೆಪಿ ಪ್ರತಿಭಟಿಸುತ್ತದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರವರ್ಗ 2 ಬಿ ಅಡಿಯಲ್ಲಿ ಜೈನರು ಬರುತ್ತಾರಾ? ಮುಸಲ್ಮಾನರು ಬಿಟ್ಟರೆ ಯಾರು ಬರುತ್ತಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕಿವಿಗೆ ಹೂವಿಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.
ಸರ್ಕಾರಿ ಗುತ್ತಿಗೆಗಳಲ್ಲಿ ಕಾಮಗಾರಿಯ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡುವುದಾಗಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಇದನ್ನು ಅನುಮೋದಿಸಿದ್ದಾರೆ. ಸದನದಲ್ಲಿ ಮಸೂದೆ ತರಲು ಮುಂದಾಗಿದ್ದಾರೆ. ಇದನ್ನು ಬಿಜೆಪಿ ಸ್ಪಷ್ಟವಾಗಿ ವಿರೋಧಿಸುತ್ತದೆ ಎಂದು ತಿಳಿಸಿದರು.
ಬಿಜೆಪಿ ಮುಸಲ್ಮಾನರ ವಿರೋಧಿಗಳಲ್ಲ. ಆದರೆ, ಅಲ್ಪಸಂಖ್ಯಾತರ ಅಥವಾ ಮುಸಲ್ಮಾನರ ತುಷ್ಟೀಕರಣದ ರಾಜಕೀಯ ನೀತಿಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದ್ದು, ಇದನ್ನು ನಾವು ಗಟ್ಟಿಯಾಗಿ ವಿರೋಧಿಸುತ್ತೇವೆ. ಮುಸಲ್ಮಾನರಿಗೆ ಎಂಎಲ್‍ಸಿ ಮಾಡಿ, ರಾಜ್ಯಸಭಾ ಸದಸ್ಯತ್ವ ಕೊಡಿ ಎಂದು ನಿನ್ನೆ ಡಿ.ಕೆ.ಶಿವಕುಮಾರ್ ಅವರು ಸವಾಲು ಹಾಕಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಡಾ.ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಗಳನ್ನಾಗಿ ನಾವು ಮಾಡಿದ್ದೆವು. ಕಾಂಗ್ರೆಸ್ಸಿನವರು ಇದನ್ನು ಮಾಡಿದ್ದಲ್ಲ ಎಂದು ನೆನಪಿಸಿದರು.
ನರೇಂದ್ರ ಮೋದಿಜೀ ಅವರ ಸರ್ಕಾರ ಬಂದ ಬಳಿಕ ನಜ್ಮಾ ಹೆಫ್ತುಲ್ಲರನ್ನು ರಾಜ್ಯಪಾಲರನ್ನಾಗಿ ನಾವು ಆಯ್ಕೆ ಮಾಡಿದ್ದೆವು. ಜಸ್ಟಿಸ್ ಅಬ್ದುಲ್ ನಜೀರ್ ಅವರಂಥ ಮಹಾನ್ ವ್ಯಕ್ತಿಗಳನ್ನು ರಾಜ್ಯಪಾಲರನ್ನಾಗಿ ಆಯ್ಕೆ ಮಾಡಿದ್ದೇವೆ. ಮಹಮ್ಮದ್ ಆರಿಫ್ ಖಾನ್ ಅವರನ್ನು ರಾಜ್ಯಪಾಲರನ್ನಾಗಿ ಆಯ್ಕೆ ಮಾಡಿದ್ದರು. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಿಗೆ ಉತ್ಕೃಷ್ಟ ಗೌರವ ‘ಭಾರತ ರತ್ನ’ ಕೊಟ್ಟದ್ದು, ಕಾಂಗ್ರೆಸ್ಸಿನವರಲ್ಲ. ನರೇಂದ್ರ ಮೋದಿಯವರ ಸರ್ಕಾರ ಕೊಟ್ಟದ್ದು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸುವುದಾಗಿ ಹೇಳಿದರು.
ಕಾಂಗ್ರೆಸ್ಸಿನ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಇಂದು ನಿನ್ನೆಯದಲ್ಲ. ನಿಮ್ಮ ಪಕ್ಷದ ದಲಿತ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಮುಸ್ಲಿಂ ಗೂಂಡಾಗಳು ನುಗ್ಗಿ ಮನೆಗೆ ಬೆಂಕಿ ಹಚ್ಚಿದರಲ್ಲವೇ? ಆಗ ನಿಮ್ಮ ದಲಿತ ಕಾಳಜಿ ಎಲ್ಲಿ ಹೋಗಿತ್ತು ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರನ್ನು ಪ್ರಶ್ನಿಸುವುದಾಗಿ ತಿಳಿಸಿದರು. ಮುಸಲ್ಮಾನರಿಗೆ ಖುಷಿ ಪಡಿಸಲು ನೀವು ಯಾವ ಮಟ್ಟಕ್ಕಾದರೂ ಇಳಿಯುತ್ತೀರಿ ಎಂದು ಟೀಕಿಸಿದರು.