ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ-ಜೆಡಿಎಸ್ ಮೈತ್ರಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಿಲ್ಲ ಮೈತ್ರಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಸ್ಪಷ್ಟನೆ ನೀಡಿದ್ದಾರೆ. ಹೆಚ್‌ಡಿಡಿ ಹೇಳಿಕೆ ಕುರಿತು ಮಾತನಾಡಿದ ವಿಜಯೇಂದ್ರ, ಸ್ವಂತ ಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಜಯೇಂದ್ರ (B.Y.Vijayendra) ಹೇಳಿದ್ದಾರೆ.
ಜೆಡಿಎಸ್ ಭವನದಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಜನವರಿ 23 ರಂದು ಬೆಂಗಳೂರಿನಲ್ಲಿ ಜನವರಿ 18 ರಂದು ಸಭೆ ಮಾಡ್ತಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡ್ತೇವೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಜೊತೆಗೆ ಇರುತ್ತೇವೆ. ವಿಧಾನ ಪರಿಷತ್ 4 ಸ್ಥಾನಗಳ ಚುನಾವಣೆಯಲ್ಲಿ ಒಂದು ಸ್ಥಾನ ಜೆಡಿಎಸ್‌ಗೆ 3 ಸ್ಥಾನ ಬಿಜೆಪಿಗೆ ನೀಡುವ ಬಗ್ಗೆ ಪ್ರಾಥಮಿಕ ಚರ್ಚೆ ಆಗಿದೆ ಅಂತಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮನೆಗೆ ಹೋಗಿದ್ದಾಗ ಎರಡನೇ ಮಗನನ್ನ ರಾಜಕೀಯಕ್ಕೆ ತನ್ನಿ ಎಂದಿದ್ದೆ: ಮಾಜಿ ಪ್ರಧಾನಿ ದೇವೇಗೌಡ
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಒಳಜಗಳ ನೋಡಿದರೆ 2028ಕ್ಕೂ ಮುನ್ನವೇ ವಿಧಾನಸಭಾ ಚುನಾವಣೆ ಬರಬಹುದು. ಬಿಜೆಪಿಯನ್ನು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಂಕಲ್ಪ ಮಾಡಬೇಕಾಗಿದೆ. ರಾಜ್ಯಾಧ್ಯಕ್ಷನಾಗಿ ರಾಜ್ಯ ಪ್ರವಾಸ ಮಾಡಿ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದೇನೆ. ಮುಂದೆ 130-140 ಸ್ಥಾನಗಳೊಂದಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಅಂತೇಳುವ ಮೂಲಕ ವಿಧಾನಸಭೆ ಮೈತ್ರಿಯನ್ನ ತಳ್ಳಿಹಾಕಿದ್ದಾರೆ.
ಈ ನಡುವೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ, ವಿಜಯೇಂದ್ರಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. ವಿಜಯೇಂದ್ರ ಬಹಳ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಯಂಗ್ ಸ್ಟಾರ್ ರೀತಿ ಕೆಲಸ ಮಾಡ್ತಿದ್ದಾರೆ. ಸ್ಥಳೀಯ ಚುನಾವಣೆಯ ಸೀಟು ಹಂಚಿಕೆ ಬಗ್ಗೆ ಮೋದಿ, ಶಾ ಜೊತೆಗೆ ಚರ್ಚೆ ಮಾಡಲು ಆಗಲ್ಲ. ಮೋದಿ, ಶಾ ಜೊತೆಗೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡ್ತೀವಿ ಅಂತೇಳುವ ಮೂಲಕ ಮೈತ್ರಿ ಇದೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ-ಜೆಡಿಎಸ್ ಮೈತ್ರಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಿಲ್ಲ: ಹೆಚ್‌ಡಿಡಿ

