ಬಲೆಗೆ ಬೀಳದ ಕೇಜ್ರಿವಾಲ್ – ಪಾಕಿಸ್ತಾನ ಮೊರೆ ಹೋದ ಬಿಜೆಪಿ

Public TV
4 Min Read
aap bjp

ನವದೆಹಲಿ: ದೆಹಲಿ ಚುನಾವಣಾ ಕಣದಲ್ಲಿ ಬಿಜೆಪಿ ಚಾಣಕ್ಯ ನೀತಿಗಳೆಲ್ಲ ಕೈಕೊಟ್ಟಂತೆ ಭಾಸವಾಗುತ್ತಿದೆ. ಚುನಾವಣಾ ಕಣದಲ್ಲಿ ಪ್ರಾದೇಶಿಕ ಪಕ್ಷ ಆಮ್ ಅದ್ಮಿ ಎದುರು ರಾಷ್ಟ್ರೀಯ ಪಕ್ಷವೊಂದು ಮಂಕಾದಂತೆ ಕಂಡು ಬರುತ್ತಿದೆ. ಕಳೆದೊಂದು ವಾರದಿಂದ ಅಬ್ಬರದ ಚುನಾವಣಾ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಬಿಜೆಪಿ ಮಾಡುತ್ತಿರುವ ಯಾವ ತಂತ್ರಗಳಿಗೂ ಸಿಲುಕದೆ ಆಪ್ ಪ್ರತಿತಂತ್ರಗಳನ್ನು ಹೆಣೆಯುವ ಮೂಲಕ ಬಿಜೆಪಿ ನಿದ್ದೆಗೆಡಿಸಿದೆ.

ಈ ಬಾರಿ ದೆಹಲಿ ಚುನಾವಣೆಯಲ್ಲಿ ಪಾಕಿಸ್ತಾನ ಹೆಚ್ಚು ಸದ್ದು ಮಾಡುತ್ತಿದೆ. ಬಿರುಸಿನ ಪ್ರಚಾರ ಮಾಡುತ್ತಿರುವ ಬಿಜೆಪಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸಚಿವರು ಹಾಗೂ ಜನಪ್ರಿಯ ಸಂಸದರ ಮೂಲಕ ಪ್ರಚಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ತನ್ನ ಬಹುತೇಕ ಪ್ರಚಾರದಲ್ಲಿ ಪೌರತ್ವ ತಿದ್ದುಪಡಿ ವಿರುದ್ಧದ ಹೋರಾಟ ಹಾಗೂ ಪಾಕಿಸ್ತಾನವನ್ನು ಎಳೆದು ತರುತ್ತಿದೆ.

modi shah

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಅನುರಾಗ್ ಠಾಕೂರ್ ದೆಹಲಿಯ ಶಾಹೀನ್ ಬಾಗ್ ಮತ್ತು ಜಾಮೀಯಾ ವಿಶ್ವವಿದ್ಯಾಲಯ ಮುಂಭಾಗ ನಡೆಯುತ್ತಿರುವ ಪ್ರತಿಭಟನೆಯನ್ನು ಚುನಾವಣಾ ಪ್ರಚಾರದಲ್ಲಿ ಎಳೆದು ತಂದಿದ್ದರು. ತುಕ್ಡೆ ತುಕ್ಡೆ ಗ್ಯಾಂಗ್ ಗಳ ಪ್ರಾಯೋಜಿತ ಪ್ರತಿಭಟನೆ, ಈ ಪ್ರತಿಭಟನೆಗಳಿಗೆ ಪಾಕಿಸ್ತಾನ ಬೆಂಬಲ ಇದೆ. ದೇಶ ವಿರೋಧಿಗಳ ಪ್ರತಿಭಟನೆ ಎಂದು ಆರೋಪಿಸಿದ್ದರು. ಅನುರಾಗ್ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಭಟನಾಕಾರರಿಗೆ ಗೋಲಿ ಮಾರೋ ಎಂದಿದ್ದರು.

CM Yogi

ಈಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರದಿ, ಅರವಿಂದ ಕೇಜ್ರಿವಾಲ್ ದೇಶ ವಿರೋಧಿ ಪಾಕಿಸ್ತಾನದೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ಕೇಜ್ರಿವಾಲ್ ಗೆದ್ದರೆ ಪಾಕಿಸ್ತಾನಕ್ಕೆ ಖುಷಿಯಾಗುತ್ತದೆ. ಹಾಗಾಗಿ ಅವರಿಗೆ ಮತ ನೀಡಬೇಡಿ ಎಂದು ಪಾಕಿಸ್ತಾನವನ್ನು ಚರ್ಚೆಗೆ ಎಳೆ ತಂದಿದ್ದಾರೆ. ಭಾರತೀಯರು ಯಾರಿಗೆ ಮತ ನೀಡಬೇಕು ಎಂಬುದನ್ನು ಪಾಕ್ ನಿರ್ಧರಿಸಬೇಕೇ ಎಂದು ಆದಿತ್ಯನಾಥ್ ಪ್ರಶ್ನಿಸಿದ್ದಾರೆ.

ಹೀಗೆ ಪಾಕಿಸ್ತಾನ ಮತ್ತು ಅರವಿಂದ ಕೇಜ್ರಿವಾಲ್ ಅವರನ್ನು ಬಿಜೆಪಿ ಹಿಡಿದು ಎಳೆದಾಡುತ್ತಿದ್ದರು ಆಮ್ ಅದ್ಮಿ ಮಾತ್ರ ಹೆಚ್ಚು ಈ ಬಗ್ಗೆ ಆಸಕ್ತಿದಾಯಕವಾಗಿಲ್ಲ. ಪಾಕಿಸ್ತಾನವಾಗಲಿ ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿಲ್ಲ. ಮೇಲ್ನೋಟಕ್ಕೆ ಆಮ್ ಅದ್ಮಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ ಯಿಂದ ಅಂತರ ಕಾಯ್ದುಕೊಳ್ಳುತ್ತಿದೆ ಎನಿಸಿದರೂ ಇದೊಂದು ಚುನಾವಣಾ ಸ್ಟಾಟರ್ಜಿ ಎನ್ನುವುದು ಮರೆಯುವಂತಿಲ್ಲ. ಪಾಕಿಸ್ತಾನ ಮತ್ತು ಸಿಎಎ ಹೋರಾಟಗಳಲ್ಲಿ ಆಪ್ ಸಿಲುಕಿಕೊಳ್ಳಲಿ ಎನ್ನುವ ಲೆಕ್ಕಚಾರದಲ್ಲಿ ಬಿಜೆಪಿ ಬಲೆ ಹೆಣೆಯುತ್ತಿದೆ. ಆದರೆ ಜಾಣ ನಡೆ ಇಟ್ಟಿರುವ ಆಮ್ ಅದ್ಮಿ, ಬಿಜೆಪಿ ಹೆಣೆದಿರುವ ಬಲೆಗೆ ಬೀಳದ ಅಭಿವೃದ್ಧಿ ಅಜೆಂಡಾವನ್ನೇ ಮತ್ತೆ ಮತ್ತೆ ಪ್ರತಿಪಾದಿಸುತ್ತಿದೆ.

Arvind Kejrival

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಕೆಲಸಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದೆ. ಆದರೆ ದೆಹಲಿ ಮತದಾರ ಮಾತ್ರ ಕೇಂದ್ರಕ್ಕೆ ಮೋದಿ ದೆಹಲಿಗೆ ಕೇಜ್ರಿವಾಲ್ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕಳೆದ ಬಾರಿ ಮೂರು ಸ್ಥಾನ ಗೆದ್ದು ಶೇ.30-36 ಮತಗಳನ್ನು ಬಾಚಿದ್ದ ಬಿಜೆಪಿ ಕನಿಷ್ಠ ಹತ್ತರ ಮೇಲೆ ಹತ್ತುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಅಭಿವೃದ್ಧಿ ಅಜೆಂಡಾ ಬಿಟ್ಟು ಪಾಕ್ ಜಪ ಮಾಡಲು ಮುಂದಾಗಿದೆ.

ಆಪ್ ನೇತೃತ್ವ ವಹಿಸಿಕೊಂಡಿರುವ ಸಿಎಂ ಅರವಿಂದ ಕೇಜ್ರಿವಾಲ್ ಮಾತ್ರ ಈ ಯಾವ ತಂತ್ರಗಳಿಗೂ ಬಲಿಯಾಗದೇ ಭರ್ಜರಿ ರೋಡ್ ಶೋ ಗಳನ್ನು ನಡೆಸುತ್ತಿದ್ದಾರೆ. ಉಚಿತ ಕುಡಿಯುವ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಾದ ಬದಲಾವಣೆ ಬಗ್ಗೆ ಪ್ರಚಾರದಲ್ಲಿ ಉಲ್ಲೇಖಿಸುತ್ತಿದ್ದಾರೆ. ಭಾರಿ ಜನಪ್ರಿಯತೆ ಗಳಿಸಿರುವ ಆಪ್ ಗೆ ವಿರುದ್ಧ ಸೆಣಸುತ್ತಿರುವ ಬಿಜೆಪಿ ಪ್ರತಿ ಹಂತದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದೆ.

AAP

ದೆಹಲಿ ವೈಫೈ ಮತ್ತು ಸಿಸಿಟಿವಿ ಅಳವಡಿಕೆ ಇನ್ನು ಆಗಿಲ್ಲ ಅಂತಾ ಗೃಹ ಸಚಿವ ಅಮಿತ್ ಶಾ ಜರಿದರೆ, ಸಂಸದ ಗೌತಮ್ ಗಂಭೀರ್ ದೆಹಲಿ ಶಾಲೆಯೊಂದರ ಟ್ವೀಟ್ ಮಾಡಿ ಮುಖಭಂಗ ಅನುಭವಿಸಿದ್ದರು. ಖಾಲಿಯಾಗಿದ್ದ ಸರ್ಕಾರಿ ಶಾಲೆಯೊಂದರ ವಿಡಿಯೋ ಹಾಕಿದ್ದ ಗಂಭೀರ್ ಇದು ದೆಹಲಿ ಶಾಲೆಯ ದುಸ್ಥಿತಿ. ಕೊಠಡಿಗಳು ಶೌಚಾಲಯಗಳು ಸುಸ್ಥಿತಿಯಲ್ಲಿಲ್ಲ, ಕುಡಿಯುವ ನೀರಿಲ್ಲ ಎಂದೇಲ್ಲ ಆರೋಪಿಸಿದ್ದರು. ಡಿಸಿಎಂ, ಶಿಕ್ಷಣ ಸಚಿವ ಮನೀಶ್ ಸಿಸೊಡಿಯಾ ಶಾಲೆ ಪಕ್ಕದ ಕಟ್ಟಡವೊಂದಕ್ಕೆ ವರ್ಗಾವಣೆ ಆಗಿರುವ ನೋಟಿಸ್ ಪ್ರತಿಯೊಂದನ್ನು ರೀ ಟ್ವಿಟ್ ಮಾಡಿ ಸಂಸದರು ನೋಟಿಸ್ ಓದಿಕೊಂಡಿಲ್ಲ ಎಂದು ವ್ಯಂಗ್ಯ ಮಾಡಿದ್ದರು.

ಆಪ್ ತನ್ನ ಸ್ವಯಂ ಸೇವಕ ಕಾರ್ಯಕರ್ತರ ಮೂಲಕ ಪ್ರಚಾರ ನಡೆಸುತ್ತಿದ್ದು ಮನೆ ಮನೆ ಬಾಗಿಲಿಗೂ ತಲುಪಲು ಪ್ರಯತ್ನ ಮಾಡುತ್ತಿದೆ. ಸ್ವತಃ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಮನೆ ಮನೆ ಪ್ರಚಾರ ನಡೆಸಿದ್ದು ನಿಮ್ಮ ಮನೆ ಮಗನಾಗಿ ನೀರಿನ ಬಿಲ್ ವಿದ್ಯುತ್ ಬಿಲ್ ಕಟ್ಟಿದ್ದೇನೆ. ಸಹೋದರ – ಸಹೋದರಿ ಶಿಕ್ಷಣ ಜವಬ್ದಾರಿ ಹೊತ್ತಿದ್ದೇನೆ ಎನ್ನುವ ಮೂಲಕ ಮತಗಳನ್ನು ಸೆಳೆಯುತ್ತಿದ್ದಾರೆ. ಆಪ್ ಐಟಿ ವಿಚಾರದಲ್ಲೂ ಬಿಜೆಪಿಗಿಂತ ಮುಂದಿದೆ. ಆಪ್, ಲಗೇ ರಹೋ ಕೇಜ್ರೀವಾಲ್ ಫೇಸ್ಬುಕ್, ಟ್ವಿಟರ್ ಖಾತೆಗಳ ಮೂಲಕ ಹೆಚ್ಚು ಜನರನ್ನು ತಲುಪಲು ಹಾಗೂ ಬಿಜೆಪಿ ಆರೋಪಗಳಿಗೆ ನೇರ ಉತ್ತರ ನೀಡುವ ಪ್ರಯತ್ನ ಮಾಡುತ್ತಿದೆ. ಚುನಾವಣೆಗೆ ಇನ್ನೇನು ಬೆರಳಣೆಕೆ ದಿನಗಳ ಬಾಕಿ ಉಳಿದಿದೆ. ಆಮ್ ಅದ್ಮಿ ಅಭಿವೃದ್ಧಿ ಅಜೆಂಡಾ, ಬಿಜೆಪಿ ಪಾಕಿಸ್ತಾನದ ಅಜೆಂಡಾದಲ್ಲಿ ಯಾವುದಕ್ಕೆ ದೆಹಲಿ ಮಂದಿ ಬಹುಪರಾಕ್ ಹೇಳ್ತಾರೆ ಎನ್ನುವುದು ಫೆಬ್ರವರಿ 11ಕ್ಕೆ ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *