ಬೆಂಗಳೂರು: ಮೈಸೂರು ಮುಡಾ ಅಕ್ರಮದ (Muda Scam) ತನಿಖೆ ಸಿಬಿಐಗೆ ಕೊಡಬೇಕು. ಅಲ್ಲದೇ ಸಿಎಂ ಸಿದ್ದರಾಮಯ್ಯ (Siddaramaiah) ಕೂಡಲೇ ರಾಜೀನಾಮೆ ನೀಡಬೇಕು, ಅಲ್ಲಿಯವರೆಗೂ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B. Y. Vijayendra) ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಮುಡಾ ಹಗರಣ ಖಂಡಿಸಿ ಮೈಸೂರು ಚಲೋ ನಡೆಸಲು ಮುಂದಾದ ವೇಳೆ ಅವರು ಮಾತನಾಡಿದ್ದಾರೆ. ಈ ವೇಳೆ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಕಾವೇರಿ ವಿಚಾರವಾಗಿ ಕಾನೂನು ತಜ್ಞರೊಂದಿಗೆ ಚರ್ಚೆ: ಡಿಕೆಶಿ
Advertisement
ಸಾವಿರಾರು ಕೋಟಿಗೂ ಮೀರಿದ ಹಗರಣ:
ಕಾಂಗ್ರೆಸ್ಸಿನ (Congress) ಪಾಪದ ಕೊಡ ತುಂಬಿದೆ. ದಲಿತರ ಹಣ ಲೂಟಿ ಮಾಡಿದ್ದೀರಿ ಅಲ್ಲದೇ ದಲಿತರು, ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಲಪಟಾಯಿಸಿದ್ದೀರಿ. ಇದನ್ನು ಸಿಬಿಐ ತನಿಖೆಗೆ ಕೊಡಬೇಕು. ಮುಡಾದಲ್ಲಿ ಸಾವಿರಾರು ಕೋಟಿಗೂ ಮೀರಿದ ದೊಡ್ಡ ಹಗರಣ ಬಯಲಾಗಿದೆ. ಇದರಿಂದ ಮುಖ್ಯಮಂತ್ರಿಗಳು ಆತಂಕಗೊಂಡಿದ್ದಾರೆ. ಮೈಸೂರಿನಲ್ಲಿ ಮುಡಾ ಎದುರು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೆವು. ಆದರೆ ಸಿಎಂ ಆದೇಶದ ಮೇರೆಗೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ನಡೆಸುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
Advertisement
Advertisement
ಭ್ರಷ್ಟಾಚಾರ ಆಗಿಲ್ಲದಿದ್ದರೆ ಸಿಬಿಐ ತನಿಖೆಗೆ ಕೊಡಿ:
ಮುಖ್ಯಮಂತ್ರಿಗಳು ಪ್ರಾಮಾಣಿಕರಾಗಿದ್ದರೆ, ಮುಡಾದಲ್ಲಿ ಭ್ರಷ್ಟಾಚಾರ ಆಗಿಲ್ಲ ಎನ್ನುವುದಾದರೆ, ಜಿಲ್ಲಾಧಿಕಾರಿಗಳ ವರದಿಯ ಬಳಿಕವೂ ಭ್ರಷ್ಟಾಚಾರ ಆಗಿಲ್ಲ ಎಂದರೆ ನಿಷ್ಪಕ್ಷಪಾತ ತನಿಖೆ ನಡೆಸಿ ಇದನ್ನು ಸಿಬಿಐ ತನಿಖೆಗೆ ಕೊಡಲಿ. ಯಾವುದೇ ಕ್ಷಣದಲ್ಲೂ ಸರ್ಕಾರ ಬೀಳಬಹುದು. ಸಿದ್ದರಾಮಯ್ಯರ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ತುಘಲಕ್ ದರ್ಬಾರ್ ಮಾಡಲು ಮುಂದಾಗಿದೆ. ಬಿಜೆಪಿಯ ಕಾರ್ಯಕರ್ತರು ಇದೆಲ್ಲದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
Advertisement
ಬಿಜೆಪಿ ಹೋರಾಟ ಹತ್ತಿಕ್ಕುವುದು ಅಕ್ಷಮ್ಯ ಅಪರಾಧ. ಬೆಳಗ್ಗೆ 7 ಗಂಟೆಗೆ ನಮ್ಮ ಮುಖಂಡರನ್ನು ಬಂಧಿಸಿದ್ದಾರೆ. ನೈಸ್ ರಸ್ತೆ ಬಳಿ ನಮ್ಮ ಬ್ಯಾನರ್, ಬಾವುಟಗಳನ್ನು ಕಿತ್ತು ಬಿಸಾಕಿ, ಕಾರ್ಯಕರ್ತರಿಗೆ ಕೊಡಲು ತಂದ ತಿಂಡಿಯನ್ನೂ ಒದ್ದು ಬಿಸಾಕಿದ್ದಾರೆ ಎಂದು ಅವರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ದಲಿತರ ಹಣ ದೋಚಿದ್ದಾರೆ:
ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ವಾಲ್ಮೀಕಿ ನಿಗಮದ ಹಣವನ್ನು ದೋಚಿ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಬಳಸಿದೆ. ರಾಜ್ಯವನ್ನು ಕಾಂಗ್ರೆಸ್ ಎಟಿಎಂ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿಯವರಿಗೆ ದುಡ್ಡನ್ನು ಕರ್ನಾಟಕದಿಂದ ಕಳುಹಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಮುಡಾ ಹಗರಣ ಮೂಲಕ ತಮ್ಮ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪುಡಾರಿಗಳಿಗೆ ನಿವೇಶನ ನೀಡಿದ 5 ಸಾವಿರ ಕೋಟಿ ರೂ. ಹಗರಣ ಇದಾಗಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಗರಣಗಳ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಉತ್ತರ ನೀಡಬೇಕು. ಅಲ್ಲದೇ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬರ ಪರಿಹಾರ ಬಿಡುಗಡೆ ವಿಚಾರ – ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ