Connect with us

Latest

ಮೋದಿ ಸರ್ಕಾರವನ್ನು ಟೀಕಿಸಿದ್ರೂ ಯಶವಂತ್ ಸಿನ್ಹಾ ವಿರುದ್ಧ ಶಿಸ್ತು ಕ್ರಮ ಇಲ್ವಂತೆ ಯಾಕೆ?

Published

on

ನವದೆಹಲಿ: ಪಕ್ಷದ ಹಿರಿಯ ನಾಯಕ ಯಶವಂತ್ ಸಿನ್ಹಾ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಹೆಚ್ಚು ಕಠಿಣವಾಗಿ ತಮ್ಮ ಟೀಕೆಗಳನ್ನು ಮಾಡಿದರೂ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮವನ್ನು ತೆಗೆದುಕೊಳ್ಳದೇ ಇರಲು ಬಿಜೆಪಿ ಮುಂದಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ಕೇಂದ್ರದ ನೀತಿಗಳ ವಿರುದ್ಧ ಸ್ವಂತ ಪಕ್ಷದ ಹಿರಿಯ ನಾಯಕರು ಮಾಡಿರುವ ವಿಶ್ಲೇಷಣೆಗಳು ವಿರೋಧಿ ಪಕ್ಷದ ನಾಯಕರಿಗೆ ಹೆಚ್ಚಿನ ಬಲವನ್ನು ತಂದುಕೊಟ್ಟ ಹಿನ್ನೆಲೆಯಲ್ಲಿ ಸಿನ್ಹಾ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬಹುದು ಎನ್ನುವ ಮಾತು ಕೇಳಿಬಂದಿತ್ತು. ಆದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರೆ ಪಕ್ಷಕ್ಕೆ ಭಾರೀ ಮುಜುಗರ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳದೇ ಇರಲು ನಿರ್ಧರಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಯಶವಂತ್ ಸಿನ್ಹಾ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಹಣಕಾಸು ಸಚಿವರು ತಮ್ಮ ಕಾರ್ಯವನ್ನು ಉತ್ತಮವಾಗಿ ನಡೆಸುವಲ್ಲಿ ವಿಫಲರಾಗಿದ್ದಾರೆ. ಭಾರತ ಅರ್ಥಿಕ ವ್ಯವಸ್ಥೆ ಒತ್ತಡಕ್ಕೆ ಸಿಲುಕಿದ್ದು ಆಪಾರ ನಷ್ಟದಲ್ಲಿದೆ ಎಂದು ವಿಶ್ಲೇಷಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್, ಯಶವಂತ್ ಸಿನ್ಹಾ ಅವರ ಆರೋಪಗಳಿಗೆ ಸರಿಯಾದ ಉತ್ತರವನ್ನು ಬಿಜೆಪಿ ನೀಡಲಿದೆ. ಈ ವಿಷಯವನ್ನು ಇಲ್ಲಿಯೆ ಬಿಟ್ಟು ಉಳಿದ ವಿಷಯಗಳ ಬಗ್ಗೆ ಗಮನಹರಿಸಬೇಕಿದೆ. ಆರ್ಥಿಕ ಸಚಿವ ಅರುಣ್ ಜೇಟ್ಲಿ ನಿರ್ಣಯಗಳು ಉತ್ತಮವಾಗಿದ್ದು, ನೋಟ್‍ಬ್ಯಾನ್ ಮತ್ತು ಜಿಎಸ್‍ಟಿ ಜಾರಿಯಿಂದ ಉಂಟಾಗಿರವ ಸಮಸ್ಯೆಗಳು ಬೇಗ ಸುಧಾರಣೆಗೊಳ್ಳಲಿದೆ ಎಂದು ಹೇಳಿದ್ದಾರೆ.

ಯಶವಂತ್ ಸಿನ್ಹಾ ಅವರ ಟೀಕೆಗೆ ಎನ್‍ಡಿಎ ಅವಧಿಯಲ್ಲಿ ಪ್ರಗತಿ ಬಗ್ಗೆ ಅವರ ಪುತ್ರ ಜಯಂತ್ ಸಿನ್ಹಾ ಅವರ ಮೂಲಕ ಬ್ಲಾಗ್ ಬರೆಸಿದ್ದು ತಂತ್ರದ ಒಂದು ಭಾಗ ಎನ್ನುವ ಮಾತುಗಳು ಈಗ ಕೇಳಿಬಂದಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿ ವಿಚಾರಗಳನ್ನು ಮತ್ತಷ್ಟು ತಿಳಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸಿನ್ಹಾ ಅವರ ಆರೋಪಗಳಿಗೆ ಪ್ರತ್ಯುತ್ತರ ನೀಡಿರುವ ಜೇಟ್ಲಿ, ನೋಟ್ ಬ್ಯಾನ್ ಕ್ರಮವು ದೇಶದಲ್ಲಿ ಉತ್ತಮ ಪರಿಣಾಮವನ್ನು ಉಂಟುಮಾಡಿದೆ ಹಾಗೂ ಜಿಎಸ್‍ಟಿ ಜಾರಿಗೆಯಿಂದ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಮಹತ್ವವನ್ನು ಉಂಟುಮಾಡಿದೆ ಎಂದು ಹೇಳಿದ್ದರು.

ಈ ಹಿಂದೆ ಅರುಣ್ ಜೇಟ್ಲಿ ವಿರುದ್ಧ ವೈಯಕ್ತಿಕ ಆರೋಪವನ್ನು ಮಾಡಿದ್ದ ಸಂಸದ ಕೀರ್ತಿ ಆಜಾದ್ ವಿರುದ್ಧ ಶಿಸ್ತು ಕ್ರಮವನ್ನು ಬಿಜೆಪಿ ಕೈಗೊಂಡಿತ್ತು. ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಕುರಿತು ತನ್ನ ಪುಸ್ತಕದಲ್ಲಿ ಹೊಗಳಿದ್ದಕ್ಕೆ ಅವರನ್ನು ಅಲ್ಪ ಸಮಯಗಳ ಕಾಲ ಪಕ್ಷ ಚಟುವಟಿಕೆಗಳಿಂದ ದೂರ ಉಳಿಸಲಾಗಿತ್ತು.

ಪಾಟ್ನದ ಸಂಸದ ಶತ್ರುಘ್ನ ಸಿನ್ಹಾ ಪಕ್ಷವು ಕೈಗೊಂಡ ಹಲವು ನಿಯಮಗಳ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಿ, ಬಹಿರಂಗವಾಗಿ ಯಶವಂತ್ ಶಿನ್ಹಾ ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ. 2015ರ ಬಿಹಾರ್ ಚುನಾವಣೆಯ ಸಂದರ್ಭದಲ್ಲಿ ಪಕ್ಷವು ಕೈಗೊಂಡ ಹಲವು ನಿಯಮಗಳಿಂದ ಸೋಲು ಪಡೆದ ಆರ್‍ಕೆ ಸಿಂಗ್, ಬೋಲಾ ಸಿಂಗ್, ಸಿಪಿ ಠಾಕೂರ್ ಹಲವಾರು ಪಕ್ಷದ ನಾಯಕರ ವಿರುದ್ಧ ಹಲವು ಪ್ರಶ್ನೆಗಳನ್ನು ಕೇಳಿದ್ದರು.

ಯಶವಂತ್ ಸಿನ್ಹಾ ಅವರು ಮೋದಿ ಸೇರಿದಂತ ಪಕ್ಷದ ನಾಯಕರನ್ನು ಟೀಕಿಸುವುದು ಇದೆ ಮೊದಲಲ್ಲ. 2014ರ ಲೋಕಸಭಾ ಚುನಾವಣೆಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾದ ಬಳಿಕ ಹಿರಿಯ ಬಿಜೆಪಿ ನಾಯಕರಾದ ಎಲ್ ಕೆ ಆಡ್ವಾಣಿ, ಯಶವಂತ್ ಸಿನ್ಹಾ ಮತ್ತು ಮುರಳಿ ಮನೋಹರ ಜೋಷಿ ಅವರು ಪಕ್ಷದ ನಾಯಕತ್ವವನ್ನು ಹಲವು ಸಂದರ್ಭಗಳಲ್ಲಿ ಟೀಕಿಸಿದ್ದರು.

ತಮ್ಮ ಸಚಿವ ಸಂಪುಟ ಸೇರ್ಪಡೆಗೆ ಸಚಿವರ ಗರಿಷ್ಠ ವಯೋಮಿತಿಯನ್ನು 75ಕ್ಕೆ ಸೀಮಿತಗೊಳಿಸಿದ್ದಕ್ಕೆ ಯಶವಂತ್ ಸಿನ್ಹಾ, ಈಗಿನ ಸರ್ಕಾರ 75 ದಾಟಿದವರನ್ನು “ಬ್ರೇನ್ ಡೆಡ್ ಎಂದು ಡಿಕ್ಲೇರ್ ಮಾಡಿದೆ”ಎಂದು ಲೇವಡಿ ಮಾಡಿದ್ದರು.

ಯಶವಂತ್ ಸಿನ್ಹಾ ಸಹಿತ ಹಲವು ಹಿರಿಯ ಬಿಜೆಪಿ ನಾಯಕರನ್ನು ಮೂಲೆ ಗುಂಪು ಮಾಡಿ `ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎನ್ನುವ ಆರೋಪ ಮೋದಿ ಮೇಲಿದೆ. ಸಿನ್ಹಾ ಅವರು ಮಾರ್ಗದರ್ಶಕ ಮಂಡಳಿಯನ್ನು ಆನೇಕ ಬಾರಿ ಲೇವಡಿ ಮಾಡಿ ಮಾತನಾಡಿದ್ದರು.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು 1 ವರ್ಷದ ಹಿಂದೆಯೇ ನಾನು ಸಮಯವನ್ನು ಕೇಳಿದ್ದೆ, ಆದರೆ ಇದೂವರೆಗೂ ನನಗೆ ಭೇಟಿಯಾಗಲು ಸಮಯವನ್ನು ನೀಡಿಲ್ಲ ಎಂದು ಯಶವಂತ್ ಸಿನ್ಹಾ ಮತ್ತೆ ಮೋದಿ ವಿರುದ್ಧ ಗುರುವಾರ ಕಿಡಿಕಾರಿದ್ದರು.

ಅರುಣ್ ಜೇಟ್ಲಿ ಆರ್ಥಿಕ ನೀತಿ ಟೀಕಿಸಿ ಲೇಖನ ಬರೆದ ಯಶವಂತ್ ಸಿನ್ಹಾ

Click to comment

Leave a Reply

Your email address will not be published. Required fields are marked *

www.publictv.in