ಮಂಗಳೂರು: ಬಿಜೆಪಿ ಅಧಿಕಾರದಲ್ಲಿ ಅತಿ ಹೆಚ್ಚು ಭಯೋತ್ಪಾದನೆ ಕೃತ್ಯಗಳು ನಡೆದಿವೆ. ಈ ದೇಶವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಅವರು ಹೊರಟಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್ ಸುದರ್ಶನ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಪತ್ರಕರ್ತರ ಜೊತೆ ಸಂವಾದ ನಡೆಸಿದ ಅವರು, ನಕ್ಸಲರನ್ನು ಹಾಗೂ ಉಗ್ರರನ್ನು ತಡೆಯುವ ಅಥವಾ ಮನವೊಲಿಸುವ ಪ್ರಯತ್ನ ಬಿಜೆಪಿ ಸರ್ಕಾರ ಮಾಡಿಲ್ಲ. ಯಾಕೆಂದರೆ ಅವರಿಗೆ ಭಯೋತ್ಪಾದನೆ ಬೇಕು. ಯಾವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಇರುತ್ತದೋ ಆಗ ಹೆಚ್ಚು ಭಯೋತ್ಪಾದನಾ ಕೃತ್ಯಗಳು ದೇಶದಲ್ಲಿ ನಡೆಯುತ್ತದೆ ಎಂದು ದೂರಿದರು.
ಬಿಜೆಪಿ ತಮ್ಮ ತಪ್ಪನ್ನು ಹೇಳಿಕೊಳ್ಳದೇ ಕಾಂಗ್ರೆಸ್ಸಿನವರ ಮೇಲೆ ಆರೋಪ ಮಾಡಿ, ನಾವು ದೇಶ ಭಕ್ತಿ ಮೆರೆದಿದ್ದೇವೆ ಅಂತಾರೆ. ಈ ದೇಶವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಅವರು ಹೊರಟಿದ್ದಾರೆ. ಎನ್‍ಡಿಎ ಸರ್ಕಾರ ದೇಶದಲ್ಲಿ ದ್ವೇಷ ಮತ್ತು ಆತಂಕದ ವಾತಾವರಣ ಸೃಷ್ಟಿಸಿದೆ. ನ್ಯೂ ಇಂಡಿಯಾ ಅಂದರೆ ದ್ವೇಷ ಮತ್ತು ಆತಂಕ ಸೃಷ್ಟಿ ಎನ್ನುವಂತಾಗಿದೆ ಎಂದು ಕಿಡಿಕಾರಿದರು.
ಅಷ್ಟೇ ಅಲ್ಲದೆ, 5 ವರ್ಷದಿಂದ ಕೇಂದ್ರದಲ್ಲಿ ಇರುವ ಮೋದಿ ಸರ್ಕಾರ ಜನವಿರೋಧಿ ಹಾಗೂ ರೈತ ವಿರೋಧಿ ಸರ್ಕಾರ. ಆದ್ದರಿಂದ ಈ ಬಾರಿ ದೇಶದ ಪ್ರಜೆಗಳು ಎನ್‍ಡಿಎ ಸರ್ಕಾರವನ್ನು ತೊಲಗಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಸೋಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡೆಸಿದರು.