ಬಿಜೆಪಿಯವರಿಗೆ ಹಸುಗಳ ಮೇಲೆ ಪ್ರೀತಿ ಇದ್ದರೆ ಗೋಮಾಂಸ ರಫ್ತು ನಿಲ್ಲಿಸಲಿ: ಎಚ್.ಸಿ.ಮಹದೇವಪ್ಪ

Public TV
2 Min Read
H.C.MAHADEVAPPA TWEET

ಮೈಸೂರು: ಬಿಜೆಪಿಯವರಿಗೆ ನಿಜವಾಗಿಯೂ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಇವರು ಮಾಡುತ್ತಿರುವ ಗೋಮಾಂಸ ರಫ್ತನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಸವಾಲು ಹಾಕಿದ್ದಾರೆ.

GOVU POOJA

ಬಲಿಪಾಡ್ಯಮಿ ದಿನದಂದು ಕಡ್ಡಾಯವಾಗಿ ಗೋಪೂಜೆ ಮಾಡಬೇಕೆಂಬ ರಾಜ್ಯ ಸರ್ಕಾರದ ಆದೇಶ ನಾಟಕೀಯವಾದದ್ದು ಎಂದು ಎಚ್.ಸಿ.ಮಹದೇವಪ್ಪ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋಪೂಜೆ ಮಾಡಬೇಕೆಂದು ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ದೀಪಾವಳಿಯ ಪೂಜೆ ವೇಳೆ ಸಹಜವಾಗಿ ನಡೆಯುವ ಗೋಪೂಜೆ ಆಚರಣೆಗಳಿಗೂ ತನ್ನ ರಾಜಕೀಯ ಬಣ್ಣ ಬಳಿದಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬಲಿಪಾಡ್ಯಮಿ ದಿನ ದೇವಾಲಯಗಳಲ್ಲಿ ಗೋಪೂಜೆ ಕಡ್ಡಾಯ: ಧಾರ್ಮಿಕ ದತ್ತಿ ಇಲಾಖೆ

ಗ್ರಾಮೀಣ ಭಾರತದಲ್ಲಿ ಕೃಷಿಯ ಮೂಲಕ ಬದುಕು ಕಂಡುಕೊಂಡಿರುವ ಎಲ್ಲಾ ರೈತರೂ ದೀಪಾವಳಿ ಮತ್ತು ಸಂಕ್ರಾಂತಿ ಹಬ್ಬದ ವೇಳೆ ಹಸುಗಳ ಮೈತೊಳೆದು, ಅಲಂಕಾರ ಮಾಡಿ ನಂತರ ಕಿಚ್ಚು ಹಾಕಿಸುವಂತಹ ಆಚರಣೆಯು ಅನಾದಿ ಕಾಲದಿಂದಲೂ ಇದೆ. ಈ ಆಚರಣೆಯನ್ನು ನಮ್ಮ ರೈತರು ಬಿಜೆಪಿಗರಿಂದ ಕಲಿಯಬೇಕೇನು ಎಂದು ಪ್ರಶ್ನಿಸಿದ್ದಾರೆ.

ಬೆಲೆ ಏರಿಕೆಯ ನಡುವೆ ದೀಪಾವಳಿಯೂ ಬೇಡ ಎಂಬ ಪರಿಸ್ಥಿತಿಗೆ ಜನಸಮಾನ್ಯರನ್ನು ನೂಕಿರುವ ಬಿಜೆಪಿಗರು ಗೋವಿನ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ಅತ್ಯಂತ ಹಾಸ್ಯಸ್ಪದ ಬೆಳವಣಿಗೆ ಎಂದು ಲೇವಡಿ ಮಾಡಿದ್ದಾರೆ.

BEEF

ಹೈನುಗಾರಿಕೆಯನ್ನೇ ಉಪ ಕಸುಬಾಗಿಸಿಕೊಂಡಿರುವ ನಮ್ಮೆಲ್ಲಾ ರೈತರ ಕುಟುಂಬಗಳಿಗೆ ತಲಾ 2 ಹಸುಗಳನ್ನು ನೀಡುವ ಮೂಲಕ ಹಸುವಿನ ಮತ್ತು ರೈತರ ಬದುಕಿಗೆ ನೆರವಾಗಲಿ. ಗಗನಕ್ಕೆ ಏರಿರುವ ರಸಗೊಬ್ಬರದ ಬೆಲೆ ಇಳಿಸಲಿ. ಕೃಷಿ ಉಪಕರಣಗಳ ಬೆಲೆಯನ್ನು ತಗ್ಗಿಸಿ ಕೃಷಿ ಉತ್ಪಾದನೆಯನ್ನು ಉತ್ತೇಜಿಸಲಿ. ಸುಮ್ಮನೇ ಗೋವಿನ ಹೆಸರಲ್ಲಿ ನಾಟಕವೇಕೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ್ ಮಾತಾಡ್ ‘ಕನ್ನಡ’ ಗೀತೆಗಳ ಕಲರವ

ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರವು ಜನಸಮಾನ್ಯರಿಗೆ ಬೆಲೆ ಏರಿಕೆಯ ಕೊಡುಗೆಯನ್ನು ನೀಡಿದ್ದು ದೇಶಪ್ರೇಮದ ಹೆಸರನ್ನು ಹೇಳಿಕೊಂಡು ದೇಶ ನಿವಾಸಿಗಳಿಗೆ ಮೋಸ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಜನಸಾಮಾನ್ಯರು ದಂಗೆ ಏಳುವುದು ಅನಿವಾರ್ಯವಾಗಿ ಕಾಣುತ್ತಿದೆ. ಜನಸಾಮಾನ್ಯರ ನೇರ ಆಕ್ರೋಶವೇ ಇದಕ್ಕೆ ಅಂತಿಮ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *