ಬೆಂಗಳೂರು: ಬಿಜೆಪಿ ಟಿಕೆಟ್ (BJP Ticket) ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಚೈತ್ರಾ (Chaithra) ಮತ್ತು ಸ್ನೇಹಿತ ಶ್ರೀಕಾಂತ್‌ಗೆ ಕೋರ್ಟ್ ಜಾಮೀನು (Bail) ಮಂಜೂರು ಮಾಡಿದೆ.
ಮೂರನೇ ಎಸಿಎಂಎಂ ನ್ಯಾಯಾಲಯ (ACMM Court) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಮಂಗಳವಾರ ಇಬ್ಬರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಲಿದ್ದಾರೆ. ಪ್ರಕರಣದಲ್ಲಿ ಚೈತ್ರಾ ಎ1 ಆರೋಪಿಯಾಗಿದ್ದರೆ ಶ್ರೀಕಾಂತ್ ಎ2 ಆರೋಪಿಯಾಗಿದ್ದಾರೆ.
ಚೈತ್ರಾ ಸೇರಿದಂತೆ 7 ಆರೋಪಿಗಳಿಗೆ ಸೆ.23 ರಂದು ಮೂರನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿತ್ತು.
ಏನಿದು ಪ್ರಕರಣ?
ಚೈತ್ರಾ ಅವರು ಉದ್ಯಮಿ ಗೋವಿಂದಬಾಬು ಪೂಜಾರಿಗೆ (Govind Babu Poojari) ಬೈಂದೂರು (Baindur) ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿಯವರು ಚೈತ್ರಾ ಹೇಳಿದಂತೆ ಆಗಾಗ ಬೆಂಗಳೂರಿಗೆ ಬರುತ್ತಿದ್ದರು. ಬೆಂಗಳೂರಿಗೆ ಬಂದಾಗ ಚೈತ್ರಾ ಕೆಲವರನ್ನು ತೋರಿಸಿ ಇವರಿಗೆ ಹೈಕಮಾಂಡ್ ನಾಯಕರ ಜೊತೆ ನಿಕಟ ಸಂಪರ್ಕವಿದ್ದು, ಇವರು ಹೇಳಿದರೆ ಟಿಕೆಟ್ ಕೊಡಿಸುತ್ತಾರೆ ಎಂದು ಹೇಳಿ ನಂಬಿಕೆ ಹುಟ್ಟಿಸಿದ್ದರು. ಇದನ್ನೂ ಓದಿ: ಚೈತ್ರಾ & ಗ್ಯಾಂಗ್‍ನಿಂದ ಟಿಕೆಟ್ ವಂಚನೆ ಪ್ರಕರಣ- ಗೋವಿಂದ ಬಾಬು ಪೂಜಾರಿ ಹೊಸ ಹೈಡ್ರಾಮಾ
ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಒಟ್ಟು 5 ಕೋಟಿ ರೂ. ಹಣ ಪಡೆದಿದ್ದರು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ಮರಳಿ ನೀಡುವಂತೆ ಕೇಳಿದ್ದಾರೆ. ಆದರೆ ಚೈತ್ರಾ ಹಣ ನೀಡಿರಲಿಲ್ಲ. ಹಣ ನೀಡದ ಕಾರಣ ಗೋವಿಂದಬಾಬು ದೂರಿನ ಆಧಾರದ ಮೇಲೆ ಸದ್ಯ ಸಿಸಿಬಿ ಪೊಲೀಸರು ಚೈತ್ರಾ ಮತ್ತು ಅವರ ಸ್ನೇಹಿತರನ್ನು ಬಂಧಿಸಿದ್ದರು.