ಗಾಂಧೀನಗರ: ಪಕ್ಷದಿಂದ ಟಿಕೆಟ್ ನೀಡದಿದ್ದಕ್ಕೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ 7 ಬಂಡಾಯ ನಾಯಕರ ವಿರುದ್ಧ ಭಾರತೀಯ ಜನತಾ ಪಕ್ಷ (BJP) ಶಿಸ್ತು ಕ್ರಮ ಕೈಗೊಂಡು ಅಮಾನತುಗೊಳಿಸಿದೆ.
ಎಲ್ಲಾ ಏಳು ಅಭ್ಯರ್ಥಿಗಳು ಗುಜರಾತ್ ವಿಧಾನಸಭಾ ಚುನಾವಣೆಯ (Gujarat Election) ಟಿಕೆಟ್ ಆಕಾಂಕ್ಷಿಗಳಾಗಿದ್ದರು. “ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಈ ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ತಿಳಿಸಿದ್ದಾರೆ. ಇದನ್ನೂ ಓದಿ: ಪಂಚಾಯತ್ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಗ್ರಾಮಸ್ಥರೇ 2 ಕೋಟಿ ನಗದು, ಕಾರು ಉಡುಗೊರೆ ಕೊಟ್ರು
ಹರ್ಷದ್ ವಾಸವ, ಅರವಿಂದ್ ಲಡಾನಿ, ಛತ್ರಸಿಂಗ್ ಗುಂಜಾರಿಯಾ, ಕೇತನ್ ಭಾಯಿ ಪಟೇಲ್, ಭರತ್ ಭಾಯಿ ಚಾವ್ಡಾ, ಉದಯ್ ಭಾಯಿ ಶಾ ಮತ್ತು ಕರಣ್ ಭಾಯಿ ಬಾರಯ್ಯ ಅವರನ್ನು ಅಮಾನತುಗೊಳಿಸಲಾಗಿದೆ.
ಗುಜರಾತಿನಲ್ಲಿ ಏಳನೇ ಅವಧಿಗೆ ಅಧಿಕಾರ ನಡೆಸಲು ಬಯಸುತ್ತಿರುವ ಬಿಜೆಪಿ, 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ. ಇದನ್ನೂ ಓದಿ: ಕಾಶಿ-ತಮಿಳು ಸಂಗಮ; ಶರ್ಟ್, ಪಂಚೆ ಧರಿಸಿ ಮಿಂಚಿದ ಮೋದಿ
2017ರ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಪ್ರಧಾನಿ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಸಿಆರ್ ಪಾಟೀಲ್ ನಾಯಕತ್ವದಲ್ಲಿ ಪಕ್ಷವು 140 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.
182 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗುಜರಾತ್ ರಾಜ್ಯದಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.