ಬೆಳಗಾವಿ: ಇಲ್ಲಿನದು ವಿಧಾನಸಭೆ, ವಿಧಾನಪರಿಷತ್ತಿನ ಅಧಿವೇಶನದಂತಿಲ್ಲ. ಇದು ಪಿಕ್ನಿಕ್‍ನಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಬಾಣಂತಿಯರ ಸರಣಿ ಸಾವು, ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಇಂದು ಬೆಳಗಾವಿಯ ಮಾಲಿನಿ ಸಿಟಿ, ಯಡಿಯೂರಪ್ಪ ರಸ್ತೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಾಣಂತಿಯರ ಸಾವು ನಿರಂತರವಾಗಿದೆ. ಹಸುಗೂಸುಗಳೂ ಸಾವನ್ನಪ್ಪುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಧ್ವನಿ ಇಲ್ಲದ ಬಾಣಂತಿಯರ ಕುಟುಂಬದ ಪರವಾಗಿ ಧ್ವನಿ ಎತ್ತುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಆ ಕೆಲಸವನ್ನು ಮಾಡಿದ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ರೈತ ನಾಯಕ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಲ್ಲಿ ಸುವರ್ಣಸೌಧ ನಿರ್ಮಿಸಿ ಉತ್ತರ ಕರ್ನಾಟಕದ ವಿಚಾರದ ಸಮಗ್ರ ಚರ್ಚೆ ಆಗಬೇಕೆಂದು ಆಶಿಸಿದ್ದರು. ಈ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಲೆಂದು ಬಯಸಿದ್ದರು. ಸದನದಲ್ಲಿ ಇವ್ಯಾವ ವಿಚಾರಗಳ ಚರ್ಚೆ ನಡೆಯುತ್ತಿಲ್ಲ. ಶಿಶುಗಳ ಮರಣ ಆಗುತ್ತಿದೆ. ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ. ಇವುಗಳ ಜೊತೆಗೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಚರ್ಚೆ ನಡೆಯುತ್ತಿಲ್ಲ ಎಂದು ವಿಜಯೇಂದ್ರ ಆಕ್ಷೇಪಿಸಿದರು.
ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯನವರ ಸರ್ಕಾರ ನಿಲ್ಲಿಸಿದೆ ಎಂದು ಟೀಕಿಸಿದರು. ಇಂಥ ದರಿದ್ರ ಸರ್ಕಾರ ರಾಜ್ಯದಲ್ಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ತಾಯಂದಿರಿಗೆ ಅವಮಾನ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು ನಮ್ಮ ತಾಯಂದಿರ ರಕ್ಷಣೆಗೆ ಬರದೆ ಇರುವ ಸಂದರ್ಭವಿದು. ಒಂದೆಡೆ ಬಾಣಂತಿಯರ ಸಾವಾಗಿದೆ. ಆ ಮಗುವನ್ನು ಯಾರು ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಇದರ ಬಗ್ಗೆಯೂ ಸಿಎಂ, ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ದೂರಿದರು. ಬಾಣಂತಿಯರ ಸಾವು, ಹಸುಗೂಸುಗಳ ಸಾವು ಸಂಭವಿಸಿದ್ದರೂ, ಸಚಿವರು, ಮುಖ್ಯಮಂತ್ರಿಗಳು ಭೇಟಿ ಕೊಡದೆ ಇರುವ ಕುರಿತು ತೀವ್ರವಾಗಿ ಖಂಡಿಸಿದರು. ಮುಖ್ಯಮಂತ್ರಿಗಳು, ಈ ಕಾಂಗ್ರೆಸ್ ಸರ್ಕಾರವು ಹಗರಣಗಳ ಸರಮಾಲೆಯಲ್ಲಿ ಸಿಲುಕಿದೆ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣವು ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ನಡೆದಿದ್ದು, ಸಚಿವರು ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿ ಬಂದರು. ಮೈಸೂರಿನ ಮುಡಾ ಹಗರಣವು 5 ಸಾವಿರ ಕೋಟಿಗೂ ಹೆಚ್ಚು ಮೊತ್ತದ್ದು. ಸ್ವತಃ ಮುಖ್ಯಮಂತ್ರಿಗಳ ಕುಟುಂಬವೇ ನೇರವಾಗಿ ಹಗರಣದಲ್ಲಿ ಭಾಗಿಯಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.