ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಸಿದ್ದರಿಂದ ಜನಸಾಮಾನ್ಯರು, ರೈತರು, ಬಡವರು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಗದಗದಲ್ಲಿ ಜನಾಕ್ರೋಶ ಯಾತ್ರೆ ಸಂಬಂಧ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ವಿಚಾರವನ್ನು ಪ್ರಮುಖವಾಗಿ ತಿಳಿಸುತ್ತಿದ್ದೇವೆ. ಅಲ್ಪಸಂಖ್ಯಾತರ ಓಲೈಕೆ ಮಾಡುವ ನಿಟ್ಟಿನಲ್ಲಿ ಬಜೆಟ್‍ನಲ್ಲಿ ಸಿದ್ದರಾಮಯ್ಯನವರು ಹಿಂದೂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ.
ಅಹಿಂದ ಹೆಸರು ಹೇಳಿಕೊಂಡು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ರೂ.ಗಳನ್ನು ಅನ್ಯ ಉದ್ದೇಶಕ್ಕೆ ವರ್ಗಾವಣೆ ಮಾಡಿ ದುರುಪಯೋಗ ಮಾಡಿಕೊಂಡಿದೆ. ಇಂಥಹ ಭ್ರಷ್ಟ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಪೆಟ್ರೋಲ್ ಮೇಲೆ 3.50 ರೂ., ಡೀಸೆಲ್ ಮೇಲೆ 5.50 ರೂ., ಹೆಚ್ಚಿಸಿದ್ದಾರೆ. ಒಂದೆಡೆ ಗ್ಯಾರಂಟಿಗಳ ಬಗ್ಗೆ ನಿರಂತರವಾಗಿ ಜಾಹೀರಾತು ಕೊಡುತ್ತಿದ್ದಾರೆ. ಇದು ಜನಪ್ರಿಯ ಸರ್ಕಾರವಲ್ಲ, ಜಾಹೀರಾತಿನ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ.
ಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ಕೇವಲ ಜಾಹೀರಾತು ನೀಡಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಪೆಟ್ರೋಲ್ ಮೇಲೆ 3.50 ರೂ, ಡೀಸೆಲ್ ಮೇಲೆ 5.50 ರೂ. ಹೆಚ್ಚಿಸಿದರೂ ಇದರ ಲಾಭ ಕರ್ನಾಟಕಕ್ಕೆ ಸಿಗುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ದೂರಿದ್ದಾರೆ.
ಎಷ್ಟು ನೂರು ಕೋಟಿ ಕೊಟ್ಟಿದ್ದೀರಿ?
ಕಳೆದ 20 ತಿಂಗಳ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಗದಗ ಜಿಲ್ಲೆ ಸೇರಿದಂತೆ ಯಾವುದೇ ಜಿಲ್ಲೆಯಲ್ಲಿ ಹೊಸ ಯೋಜನೆಗಳು ಕಾರ್ಯಾರಂಭ ಮಾಡಿಲ್ಲ. ಹಿಂದೆ ಬಿಜೆಪಿಯ ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಿದ್ದಾಗ ಗದಗ ಜಿಲ್ಲೆಗೆ ನಾಲ್ಕರಿಂದ ಐದು ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದರು. ಇವತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಬಳಿಕ ಎಷ್ಟು ನೂರು ಕೋಟಿ ಹಣವನ್ನು ಗದಗ ಜಿಲ್ಲೆ ಅಭಿವೃದ್ಧಿಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಕುಡಿಯುವ ನೀರಿನ ಹಾಹಾಕಾರವನ್ನೂ ಸರಿಪಡಿಸಿಲ್ಲ
ಇವರ ಯೋಗ್ಯತೆಗೆ ಕುಡಿಯುವ ನೀರಿನ ಹಾಹಾಕಾರವನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಇನ್ನು ಅಭಿವೃದ್ಧಿಗೆ ದುಡ್ಡು ಕೊಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನಮಗೆ ಸಿದ್ದರಾಮಯ್ಯನವರ ಬಗ್ಗೆ ಹೊಟ್ಟೆಕಿಚ್ಚಿಲ್ಲ. ಆದರೆ, ಗ್ಯಾರಂಟಿ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ರೈತರು ಹೊಲಕ್ಕೆ ವಿದ್ಯುತ್ ಸಂಪರ್ಕ ಪಡೆಯಲು 25 ಸಾವಿರ ರೂ. ಕಟ್ಟಿದರೆ ಸಾಕಿತ್ತು. ಇವತ್ತು ಸಿದ್ದರಾಮಯ್ಯನವರ ಆಡಳಿತದಲ್ಲಿ 2.5 ಲಕ್ಷ ರೂ.ನಿಂದ 3 ಲಕ್ಷ ರೂ. ಕಟ್ಟಬೇಕಾಗಿದೆ. 20 ತಿಂಗಳಲ್ಲಿ ಹಾಲಿನ ದರ 9 ರೂ. ಹೆಚ್ಚಿಸಿದ್ದಾರೆ. ಬಡವರು ಏನು ಮಾಡಬೇಕು ಎಂದು ಅವರು ಕಿಡಿಕಾರಿದ್ದಾರೆ.