ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಬಹಳ ಮುಖ್ಯ ಪಾತ್ರವಹಿಸಿದ್ದ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಹಾಡಿ ಹೊಗಳಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸದಸ್ಯರು ಅಭಿನಂದನೆ ಸಲ್ಲಿಸಿದ ಬಳಿಕ ಎಚ್‍ಡಿ ಕುಮಾರಸ್ವಾಮಿ ಪ್ರಸ್ತಾವನೆ ಸಲ್ಲಿಸಿ ಮಾತನಾಡಿದರು. ಇದಾದ ಬಳಿಕ ಬಿಎಸ್‍ವೈ ತಮ್ಮ ಮಾತಿನಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮಧ್ಯೆ ಡಿಕೆ ಶಿವಕುಮಾರ್ ಅವರ ಕೆಲಸವನ್ನು ಹೊಗಳಿ ಅನುಕಂಪ ವ್ಯಕ್ತಪಡಿಸಿದರು.
ಸ್ವಾಮಿ.. ಶಿವಕುಮಾರ್ ಅವರೇ ನೀವು ನಾಳೆ ಪಶ್ಚಾತ್ತಾಪ ಪಡುವವರಿದ್ದೀರಿ. ಯಾವುದು ಮಾಡಬಾರದಂತಹ ಅಕ್ಷಮ್ಯ ಅಪರಾಧ ಮಾಡಿ, ಎಲ್ಲರನ್ನು ರಕ್ಷಣೆ ಮಾಡಿ, ಈ ನಾಡಿನ ಜನರ ನಂಬಿಕೆ, ವಿಶ್ವಾಸ, ದ್ರೋಹ ಮಾಡಿದಂತಹ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಕುಳಿತುಕೊಳ್ಳಲು ರಕ್ಷಣೆ ಕೊಟ್ಟಿದ್ದೀರಿ. ಶಿವಕುಮಾರ್ ಅವರೇ ನಾನಿವತ್ತು ಯಾವುದೇ ಮಾತನ್ನು ಹೇಳುವುದಿಲ್ಲ. ಕಾಲವೇ ಎಲ್ಲವನ್ನೂ ಹೇಳುತ್ತೆ. ಮುಳುಗೋ ದೋಣಿಯಲ್ಲಿ ನೀವು ಈಗ ಕುಳಿತ್ತಿದ್ದೀರಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನನಗೂ ಯಡಿಯೂರಪ್ಪ ಅವರಿಗೂ ಸಂಬಂಧ ಪ್ರೀತಿ, ವಿಶ್ವಾಸ ಇರಬಹುದು. ಆದ್ರೆ ನಾನು ಖಳನಾಯಕ ಅನ್ನಿಸಿಕೊಳ್ಳಲು ತಯಾರಿಲ್ಲ. ಪಕ್ಷ ಹಾಗೂ ರಾಹುಲ್ ಗಾಂಧಿಯವರ ಮಾರ್ಗದರ್ಶನದಂತೆ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ ಅಷ್ಟೇ ಅಂತ ಅವರು ಹೇಳಿದ್ರು. ಈ ವೇಳೆ ಯಡಿಯೂರಪ್ಪನವರು ಸರಿ ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಅಂತ ಹೇಳಿದ್ರು.
ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿ, ಒನ್ ಮ್ಯಾನ್ ಫುಡ್ ಈಸ್ ಅನದರ್ ಮ್ಯಾನ್ಸ್ ಪಾಯಿಸನ್. ಅವರಿಗೆ ವಿಲನ್ ಆದ್ರೆ ಕೆಲವರಿಗೆ ನೀವು ಹೀರೋ ಆಗಿದ್ದೀರಿ. ಆದ್ರೆ ಎಲ್ಲರಿಗೂ ಹೀರೋ ಆಗಲು ಸಾಧ್ಯವಿಲ್ಲ ಅಂತ ಹಾಸ್ಯ ಚಟಾಕಿ ಹಾರಿಸಿದ್ರು. ಸ್ಪೀಕರ್ ಅವರ ಈ ಮಾತಿಗೆ ಇಡೀ ಕಲಾಪವೇ ನಗೆಗಡಲಲ್ಲಿ ತೇಲಿತು.
ಮತ್ತೆ ಮಾತು ಮುಂದುವರಿಸಿದ ಯಡಿಯೂರಪ್ಪ ಅವರು, ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ನಿಮ್ಮನ್ನು ನಾನು ಖಳನಾಯಕ ಅಂತ ಹೇಳ್ತೀನಾ? ಅಷ್ಟೇ ಅಲ್ಲದೇ ಅಲ್ಲಿದ್ದರೆ ನೀವು ಮುಖ್ಯಮಂತ್ರಿ ಆಗ್ತೀರಾ ಎಂದು ಡಿಕೆಶಿಯನ್ನು ಪ್ರಶ್ನಿಸಿದರು.
ಇಲ್ಲಿ ಕೇಳಿ ಶಿವಕುಮಾರ್ ಅವರೇ, ನಿಮ್ಮನ್ನು ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಅನ್ನೋ ಹೆಸರನ್ನ ಇಲ್ಲದಂತೆ ಅಪ್ಪ-ಮಕ್ಕಳು ಸೇರಿ ಮಾಡದೇ ಇದ್ದಲ್ಲಿ ನನ್ನನ್ನು ಯಡಿಯೂರಪ್ಪ ಅಂತ ಕರಿಯಬೇಡಿ ಅಂತ ಸವಾಲೆಸೆದು ತಮ್ಮ ಮಾತನ್ನು ಮುಂದುವರಿಸಿದರು. ಬಿಎಸ್‍ವೈ ಈ ರೀತಿಯಾಗಿ ಮಾತನಾಡುತ್ತಿದ್ದರೆ ಡಿಕೆ ಶಿವಕುಮಾರ್ ನಗುಮುಖದಲ್ಲೇ ಭಾಷಣವನ್ನು ಕೇಳುತ್ತಿದ್ದರು.