ಬೆಂಗಳೂರು: ಚಂದ್ರಗ್ರಹಣದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಯಡಿಯೂರಪ್ಪ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಲೋಕಸಭೆ ಚುನಾವಣೆಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ತಯಾರಿ ಬಗ್ಗೆ ಚರ್ಚೆ ನಡೆಸಲಾಗಿದೆ. ರೈತರ ಸಂಪೂರ್ಣ ಸಾಲ ಮನ್ನಾ ಆಗ್ರಹಿಸಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ರೈತರ ಸಾಲ ಮನ್ನಾವೇ ಬಿಜೆಪಿಗೆ ಅಸ್ತ್ರವಾಗಿದೆ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗಿನ ವಿಚಾರದ ಬಗ್ಗೆ, ಹೆಚ್ ಡಿಕೆ ಹೇಳಿಕೆಯ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.
Advertisement
Advertisement
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಬೆಂಗಳೂರು ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದೆ. ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರಾದ ಅನಂತ್ ಕುಮಾರ್, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಅರವಿಂದ್ ಲಿಂಬಾವಳಿ, ಸಿ.ಟಿ. ರವಿ, ನಳೀನ್ ಕುಮಾರ್ ಕಟೀಲ್, ಗೋವಿಂದ ಕಾರಜೋಳ, ಪ್ರಹ್ಲಾದ್ ಜೋಷಿ, ಆರ್. ಅಶೋಕ್, ಕೆ.ಎಸ್.ಈಶ್ವರಪ್ಪ, ಉದಾಸಿ, ಬಿ.ಎಲ್.ಸಂತೋಷ್ ಭಾಗಿಯಾಗಿದ್ದಾರೆ.
Advertisement
ನಳೀನ್ ಕುಮಾರ್ ವಾಪಸ್:
ಈ ಮೊದಲು ರಾಜ್ಯ ಬಿಜೆಪಿ ಕಚೇರಿಯಲ್ಲೇ ಮೊದಲು ಸಭೆ ನಿಗದಿ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಜಿಂದಾಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಅಲ್ಲೇ ಸಭೆ ಫಿಕ್ಸ್ ಅಂತಾ ನಿನ್ನೆ ಕೋರ್ ಕಮಿಟಿ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಬಿಜೆಪಿ ಕೋರ್ ಕಮಿಟಿ ಸಭೆ ಬೆಂಗಳೂರು ಹೊರವಲಯದ ಖಾಸಗಿ ಹೋಟೆಲ್ ಗೆ ಶಿಫ್ಟ್ ಆಗಿತ್ತು. ಹೀಗಾಗಿ ಎಲ್ಲಿಗೆ ತೆರಳಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಕಚೇರಿಗೆ ಬಂದು ಸಂಸದ ನಳೀನ್ ಕಟೀಲ್ ಅವರು ವಾಪಸ್ ತೆರಳಿದ್ದಾರೆ.