ಗಾಂಧಿನಗರ: ಇಡೀ ದೇಶದ ಗಮನ ಗುಜರಾತ್ ವಿಧಾನಸಭಾ ಚುನಾವಣೆಯ ಮೇಲಿದೆ. ಇತ್ತ ಕಾಂಗ್ರೆಸ್ ಹೇಗಾದರೂ ಮಾಡಿ ಗುಜರಾತ್ ನಲ್ಲಿ ಸರ್ಕಾರ ರಚಿಸಬೇಕು ಎಂದು ರಾಜಕೀಯ ತಂತ್ರ-ರಣತಂತ್ರಗಳನ್ನು ರೂಪಿಸುತ್ತಿದೆ. ಬಿಜೆಪಿಯು ಸಹ ಈ ಚುನಾವಣೆಯ ಪ್ರತಿಷ್ಠೆಯ ಕಣವಾಗಿದ್ದು, ಇಲ್ಲಿಯ ಸೋಲು-ಗೆಲುವಿನ ಲೆಕ್ಕಾಚಾರ ಮುಂಬರುವ ಕರ್ನಾಟಕ ರಾಜ್ಯದ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಗುಜರಾತಿನ ಬಿಜೆಪಿ ಶಾಸಕ ಜೇಟಾಭಾಯ್ ಸೋಲಂಕಿ ಅವರು ಶನಿವಾರ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋಲಂಕಿ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಬಿಜೆಪಿಯಲ್ಲಿ ದಲಿತರನ್ನು ಅತ್ಯಾಚಾರಿಗಳು ಎಂಬ ಭಾವನೆಯಲ್ಲಿ ನೋಡಲಾಗುತ್ತಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
Advertisement
Advertisement
ಪಕ್ಷ ಈ ಬಾರಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲ್ಲ ಎಂದು ತಿಳಿಸಿತು. ಸಹಜವಾಗಿ ಇದು ನನ್ನ ಅಸಮಾಧಾನಕ್ಕೆ ಕಾರಣವಾಗಿದ್ದು, ನಾನು ಪಕ್ಷವನ್ನು ತ್ಯಜಿಸಿ ರಾಜೀನಾಮೆ ಪತ್ರವನ್ನು ಪಕ್ಷದ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಿದ್ದೇನೆ. ಪಕ್ಷ ಎಂದೂ ನನ್ನ ಮಾತನ್ನು ಕೇಳುವ ಪ್ರಯತ್ನ ಕೂಡ ಮಾಡಿಲ್ಲ. ಪಕ್ಷ ಕೋಡಿನಾರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ನಿರ್ಧರಿಸಿದೆ. ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಮನವೊಲಿಸಲು ಪ್ರಯತ್ನ ಮಾಡುತ್ತಿದೆ ಎಂದು ಸೋಲಂಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಸಿಎಂ ರೂಪಾನಿ ವಿರುದ್ಧ ಆರೋಪ: ರಾಜ್ಯ ಬಿಜೆಪಿಯಲ್ಲಿ ದಲಿತರನ್ನು ಅತ್ಯಾಚಾರಿಗಳೆಂದು ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲಿ ದಲಿತ ಸಮುದಾಯದ ಪರಿಸ್ಥಿತಿ ತುಂಬಾ ಶೋಚನೀಯ ಸ್ಥಿತಿಯಲ್ಲಿದೆ. ಆನಂದಿ ಬೆನ್ ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಂಪುಟದಲ್ಲಿ ದಲಿತರ ಪರವಾದ ಯೋಜನೆಗಳನ್ನು ತರುವಲ್ಲಿ ಮಹತ್ವದ ಹೆಜ್ಜೆಯನ್ನು ಇಡುತ್ತಿದ್ದರು. ಆದರೆ ವಿಜಯ್ ರೂಪಾನಿ ಬಂದ ಬಳಿಕ ದಲಿತ ಪರ ಯೋಜನೆಗಳನ್ನು ತರುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಸೋಲಂಕಿ ಚುನಾವಣೆಯಲ್ಲಿ ಸ್ವತಂತ್ರ ಆಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಅಥವಾ ಬೇರೆ ಪಕ್ಷವನ್ನು ಸೇರಲಿದ್ದಾರೆ ಎಂಬ ಮಾಹಿತಿ ಇದೂವರೆಗೂ ತಿಳಿದು ಬಂದಿಲ್ಲ.