ಬೆಂಗಳೂರು: ಶುಕ್ರವಾರ ಸಿಎಂ ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದರು. ಇದೀಗ ಸಿಎಂ ವಿಶ್ವಾಸ ಮತಯಾಚನೆಗೆ ಭಂಗ ತರಲು ಬಿಜೆಪಿ ಮೆಗಾ ಪ್ಲಾನ್ ಮಾಡಿಕೊಂಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಒಂದು ವೇಳೆ ಸಿಎಂ ಲಾಸ್ಟ್ ಗೇಮ್ ಆಡಿದರೂ ಬಿಜೆಪಿ ಆ ಲಾಸ್ಟ್ ಆಟಕ್ಕೂ ಪ್ಲಾನ್ ಮಾಡಿಕೊಂಡಿದೆ. ಕೊನೆಯ ಅಸ್ತ್ರವಾಗಿ ಕೈಯಲ್ಲಿರುವ 5 ವಿಕೆಟ್ ಉರುಳಿಸಲು ಬಿಜೆಪಿಯಿಂದ ಮೆಗಾ ಪ್ಲಾನ್ ನಡೆದಿದೆ. ದೋಸ್ತಿ ಸರ್ಕಾರ ಉಳಿಯಬೇಕಾದರೆ ಐವರು ಶಾಸಕರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಈಗಾಗಲೇ ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಶಾಸಕರು ಕೈ ಕೊಟ್ಟರೆ ಬಿಜೆಪಿ `ಡೇಂಜರ್’ ಆಪರೇಷನ್ ಮಾಡಲು ಚಿಂತನೆ ಮಾಡಿದೆ.
ದೋಸ್ತಿಯಿಂದ ಐವರು ಶಾಸಕರ ರಾಜೀನಾಮೆಗೆ ಬಿಜೆಪಿ ಪ್ಲಾನ್ ಮಾಡಿದೆ. ಬೆಳಗಾವಿಯ ನಾಲ್ವರು ಮತ್ತು ಬೆಂಗಳೂರಿನ ಓರ್ವ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಈಗಾಗಲೇ ಬೆಳಗಾವಿ ಶಾಸಕರ ಜೊತೆ ಮುಂಬೈನಲ್ಲಿರುವ ಅತೃಪ್ತ ಶಾಸಕ ಜಾರಕಿಹೊಳಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇತ್ತ ರಾಮಲಿಂಗಾ ರೆಡ್ಡಿ, ರೋಷನ್ ಬೇಗ್, ಸುಧಾಕರ್, ಎಂಟಿಬಿ ನಾಗರಾಜ್ ನಾಲ್ವರು ನೆರವು ನೀಡಬಹುದೆಂಬ ನಂಬಿಕೆಯಲ್ಲಿ ಕಾಂಗ್ರೆಸ್ ಇದೆ. ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಜೊತೆ ಚರ್ಚೆ ಬಳಿಕ ಈ ವಿಶ್ವಾಸ ಹೆಚ್ಚಾಗಿದೆ. ಅಲ್ಲದೆ ರಾಮಲಿಂಗಾ ರೆಡ್ಡಿ, ಬೇಗ್ ಮೂಲಕ ಓರ್ವ ಅತೃಪ್ತನ ಮನವೊಲಿಕೆ ಮಾಡಿಸುವ ನಂಬಿಕೆ ಕಾಂಗ್ರೆಸ್ಸಿಗರದ್ದಾಗಿದೆ.
ಈಗಾಗಲೇ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು ಎಂಟಿಬಿ ನಾಗರಾಜ್ ಮನೆಗೆ ಭೇಟಿ ನೀಡಿ ಸತತ 7 ಗಂಟೆಗಳ ಕಾಲ ಚರ್ಚೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅದರಂತೆಯೇ ಎಂಟಿಬಿ ಕೂಡ ನಾನು ಸುಧಾರಕ್ ಜೊತೆ ಮಾತನಾಡಿದ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ. ಹೀಗಾಗಿ ರಾಜೀನಾಮೆಗೆ ಕಾಲಾವಕಾಶ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.