ಬೆಂಗಳೂರು: ಬಿಜೆಪಿ ಇಂದು 7 ಕ್ಷೇತ್ರಗಳನ್ನು ಹೊರತುಪಡಿಸಿ ಕರ್ನಾಟಕದ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದೆ.
ರಾಜ್ಯ ನಾಯಕರು ಈ ಹಿಂದೆ ಸಭೆ ನಡೆಸಿ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡಿಗೆ ಕಳುಹಿಸಿಕೊಟ್ಟಿತ್ತು. ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನ ಹಿನ್ನೆಲೆ ಮುಂದೂಡಿಕೆ ಆಗಿದ್ದ ಬಿಜೆಪಿ ಕೇಂದ್ರ ಚುನಾವಣಾ ಸಮತಿ ಸಭೆ ಮಂಗಳವಾರ ರಾತ್ರಿ ನಡೆದಿತ್ತು.
ಈ ಸಭೆಯ ನೇತೃತ್ವವಹಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಒಳಗೊಂಡ ಹೈಕಮಾಂಡ್ ರಾಜ್ಯ ನಾಯಕರ ಅಭಿಪ್ರಾಯ ಕಲೆ ಹಾಕಿತ್ತು. ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್ ಇಂದು ಅಧಿಕೃತವಾಗಿ ಪ್ರಕಟಿಸಿದೆ.
ಹೆಸರು ಯಾಕೆ ಪ್ರಕಟವಾಗಿಲ್ಲ?
ಬೆಂಗಳೂರು ದಕ್ಷಿಣ: ರಾಜ್ಯದ ಘಟಕದಿಂದ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರ ಹೆಸರನ್ನು ಒಮ್ಮತದ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅಭ್ಯರ್ಥಿ ಘೋಷಣೆ ಆಗದೇ ಇರುವುದಕ್ಕೆ ಕಾರಣ ತಿಳಿದು ಬಂದಿಲ್ಲ.
ಕೋಲಾರ: ಇನ್ನೂ ಅಂತಿಮವಾಗದ ಅಭ್ಯರ್ಥಿ, ಎರಡಕ್ಕಿಂತ ಅಧಿಕ ಅಭ್ಯರ್ಥಿಗಳ ಹೆಸರು ಪೈಪೋಟಿ ಹಿನ್ನಲೆ ಘೋಷಣೆ ಆಗಿಲ್ಲ. ಡಿ.ಎಸ್ ವೀರಯ್ಯ/ ಛಲವಾದಿ ನಾರಾಯಣಸ್ವಾಮಿ ಹೆಸರು ಚರ್ಚೆಯಲ್ಲಿತ್ತು.
ಮಂಡ್ಯ: ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದರು. ಆದರೆ ಈ ವಿಚಾರದ ಬಗ್ಗೆ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ರಾಯಚೂರು: ಅಮರೇಶ್ ನಾಯ್ಕ್, ತಿಪ್ಪರಾಜು ನಡುವೆ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಪ್ರಕಟವಾಗಿಲ್ಲ.
ಬೆಂಗಳೂರು ಗ್ರಾಮಾಂತರ: ಸಿ.ಪಿ.ಯೋಗೀಶ್ವರ್ ಸ್ಪರ್ಧಿಸುತ್ತಾರಾ ಅಥವಾ ಅವರ ಮಗಳನ್ನು ನಿಲ್ಲಿಸುತ್ತಾರಾ ಎನ್ನುವ ಬಗ್ಗೆ ಗೊಂದಲವಿದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮವಾಗಿಲ್ಲ.
ಚಿಕ್ಕೋಡಿ: ಅಣ್ಣಾಸಾಹೇಬ್ ಜೊಲ್ಲೆ ಮತ್ತು ರಮೇಶ್ ಕತ್ತಿ ನಡುವಿನ ಪೈಪೋಟಿ ಇರುವ ಕಾರಣ ಈ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟವಾಗಿಲ್ಲ.
ಕೊಪ್ಪಳ: ಹಾಲಿ ಸಂಸದ ಕರಡಿ ಸಂಗಣ್ಣ ವಿರೋಧಿ ಅಲೆ ಇದೆ ಎನ್ನುವುದು ಸಮೀಕ್ಷೆಯಲ್ಲಿ ತಿಳಿದು ಬಂದಿತ್ತು. ಇದರ ಜೊತೆಯಲ್ಲೇ ಎರಡಕ್ಕಿಂತ ಹೆಚ್ಚು ಅಭ್ಯರ್ಥಿಗಳ ಪೈಪೋಟಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೆಸರು ಪ್ರಕಟವಾಗಿಲ್ಲ.
ಕೇಸರಿ ಕದನ ಕಲಿಗಳು
1. ಸುರೇಶ್ ಅಂಗಡಿ, ಬೆಳಗಾವಿ
2. ಪಿ.ಸಿ. ಗದ್ದಿಗೌಡರ್, ಬಾಗಲಕೋಟೆ
3. ರಮೇಶ್ ಜಿಗಜಿಣಗಿ, ವಿಜಯಪುರ
4. ಉಮೇಶ್ ಜಾಧವ್, ಕಲಬುರಗಿ (ಹೊಸಮುಖ)
5. ಭಗವಂತ ಖೂಬ, ಬೀದರ್
6. ದೇವೇಂದ್ರಪ್ಪ, ಬಳ್ಳಾರಿ (ಹೊಸಮುಖ)
7. ಶಿವಕುಮಾರ್ ಉದಾಸಿ, ಹಾವೇರಿ
8. ಪ್ರಲ್ಹಾದ್ ಜೋಷಿ, ಧಾರವಾಡ
9. ಅನಂತಕುಮಾರ್ ಹೆಗಡೆ, ಉತ್ತರ ಕನ್ನಡ
10. ಜಿ.ಎಂ. ಸಿದ್ದೇಶ್ವರ, ದಾವಣಗೆರೆ
11. ಬಿ.ವೈ, ರಾಘವೇಂದ್ರ, ಶಿವಮೊಗ್ಗ
12. ಶೋಭಾ ಕರಂದ್ಲಾಜೆ, ಉಡುಪಿ ಚಿಕ್ಕಮಗಳೂರು
13. ಎ. ಮಂಜು, ಹಾಸನ (ಹೊಸಮುಖ)
14. ನಳೀನ್ ಕುಮಾರ್, ದಕ್ಷಿಣ ಕನ್ನಡ
15. ಆನೇಕಲ್ ನಾರಾಯಣಸ್ವಾಮಿ, ಚಿತ್ರದುರ್ಗ (ಹೊಸ ಮುಖ)
16. ಜಿ.ಎ. ಬಸವರಾಜು, ತುಮಕೂರು (ಮತ್ತೊಮ್ಮೆ ಅವಕಾಶ)
17. ಪ್ರತಾಪ್ ಸಿಂಹ, ಮೈಸೂರು
18. ಸದಾನಂದಗೌಡ, ಬೆಂಗಳೂರು ಉತ್ತರ
19. ಪಿ.ಸಿ. ಮೋಹನ್, ಬೆಂಗಳೂರು ಕೇಂದ್ರ
20. ಬಿ.ಎನ್. ಬಚ್ಚೇಗೌಡ, ಚಿಕ್ಕಬಳ್ಳಾಪುರ (ಮತ್ತೊಮ್ಮೆ ಅವಕಾಶ)
21. ಶ್ರೀನಿವಾಸ ಪ್ರಸಾದ್, ಚಾಮರಾಜನಗರ ( ಹೊಸ ಮುಖ )