Connect with us

Bengaluru City

ಸಿದ್ದರಾಮಯ್ಯ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ: ಬಿಜೆಪಿಯಿಂದ ಸಿಎಜಿ ವರದಿ ಆಧರಿಸಿ ಆರೋಪ

Published

on

ಬೆಂಗಳೂರು: ಕಳೆದ ಬಾರಿಯ ಸಿದ್ದರಾಮಯ್ಯನವರ ಸರ್ಕಾರದಿಂದ 35 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಪ್ರಧಾನ ಮಹಲೇಖಪಾಲರ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್) ವರದಿ ಆಧರಿಸಿ ಬಿಜೆಪಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದೆ.

ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಶಾಸಕ ಅಶ್ವಥ್ ನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲೂಟಿ ಅವಧಿ 2016-17 ಎಂಬ ಶೀರ್ಷಿಕೆಯಡಿಯಲ್ಲಿ 36 ಪುಟಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ್ದಾರೆ.

ಸಿಎಜಿ ವರದಿಯಾಧರಿಸಿ ಬಿಡುಗಡೆ ಮಾಡಿರುವ ಪುಸ್ತಕದ ಮುಖಪುಟದಲ್ಲಿ ಸಿದ್ದರಾಮಯ್ಯನವರು ಕರ್ನಾಟಕ ಸರ್ಕಾರದ ಖಜಾನೆಯಿಂದ ಹಣ ಹೊತ್ತುಕೊಂಡು ಹೋಗಿ, ಪಾರ್ಟಿ ಫಂಡ್‍ಗೆ ಕೊಡುವುದನ್ನು ಚಿತ್ರಿಸಲಾಗಿದೆ.

2016-17ನೇ ಆಯ-ವ್ಯಯದಲ್ಲಿ 35 ಸಾವಿರ ಕೋಟಿ ರೂಪಾಯಿಯಷ್ಟು ವೆಚ್ಚ ಹಾಗೂ ಸ್ವೀಕೃತಿಯ ಲೆಕ್ಕ ತಾಳೆ ಆಗುತ್ತಿಲ್ಲ. ಇದೇ ಸಿಎಜಿ ವರದಿ ಆಧರಿಸಿ ಸಿದ್ದರಾಮಯ್ಯನವರ ಮೇಲೆ ಕ್ರಮಕ್ಕೆ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿಎಜಿ ವರದಿ ಆಧರಿಸಿ ಬಿಜೆಪಿ ಬಿಡುಗಡೆ ಮಾಡಿದ ಕಿರುಹೊತ್ತಿಗೆಯಲ್ಲಿರುವ ಪ್ರಮುಖ ಆರೋಪಗಳು

* 788 ಕೆರೆಗಳಿಗೆ ನೀರು ತುಂಬಲಿಲ್ಲ. ಆದರೆ 1433.41 ಕೋಟಿ ರೂ. ಬಿಡುಗಡೆಯಾಗಿದೆ
* ಶಾಸಕಾಂಗದ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ಹಣ ಬಿಡುಗಡೆ.
* ಬಡ್ಡಿ ಹಣದಲ್ಲಿ ಅಧಿಕಾರಿಗಳ ಮೋಜು
* ಯೂನಿಫಾರಂ ಖರೀದಿಯಲ್ಲಿ 1.72 ಕೋಟಿ ರೂ. ಹಗರಣ
* 115.10 ಕೋಟಿ ರೂ. ಲ್ಯಾಪ್ ಟಾಪ್ ಹಗರಣ
* ಬಳಕೆಯಾಗದ 1199.81 ಕೋಟಿ ರೂ. ಸರ್ಕಾರಕ್ಕೆ ಮರು ಪಾವತಿ ಮಾಡಿಲ್ಲ
* 254.34 ಕೋಟಿ ರೂ. ಗಳಿಗೆ ಬಳಕೆ ಪ್ರಮಾಣ ಪತ್ರ ಕೊಟ್ಟಿಲ್ಲ
* 7378.34 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡದೆ ಕಾಮಗಾರಿಗೆ ಅವಕಾಶ

ಈ ಕುರಿತು ಮಾತನಾಡಿದ ರವಿಕುಮಾರ್, ಕಳೆದ 3 ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಸಿಎಜಿ ವರದಿಯನ್ನು ಮಂಡಿಸಲಾಗಿದೆ. 2016-17ರ ಆಯವ್ಯಯದ ವೆಚ್ಚದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ವರದಿ ಆಧರಿಸಿ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ರಮ ಕೈಗೊಳ್ಳಬೇಕು. ಸಾಕಷ್ಟು ಹಗರಣದ ವರದಿಯು ಕಿರು ಹೊತ್ತಿಗೆಯಲ್ಲಿ ನೀಡಲಾಗಿದೆ. ಸಿಎಜಿ ವರದಿ ಮತ್ತೊಮ್ಮೆ ಪಬ್ಲಿಕ್ ಡಿಬೇಟ್ ಆಗಬೇಕು. ಅಲ್ಲದೇ ಚಳಿಗಾಲದ ಅಧಿವೇಶನದಲ್ಲಿ ಈ ವರದಿಯ ಬಗ್ಗೆ ಚರ್ಚೆಯಾಗಬೇಕು. ರಮೇಶ್ ಕುಮಾರ್ ನಮ್ಮ ಮಾವನ ಮಗ ಅಲ್ಲ. ರಮೇಶ್ ಕುಮಾರ್ ಸಚಿವರಾಗಿರುವಾಗಲೇ, ಆರೋಗ್ಯ ಇಲಾಖೆಯಲ್ಲಿ ಹಗರಣ ನಡೆದಿದೆ. ಈ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಕರಣ ಸಾಬೀತಾಗಿದೆ. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅಶ್ವಥ್ ನಾರಾಯಣ್, 2016-17ರ ಸಿಎಜಿ ವರದಿಯಲ್ಲಿ 35 ಸಾವಿರ ಕೋಟಿ ರೂಪಾಯಿ ಹಣ ಟ್ಯಾಲಿ ಆಗಿಲ್ಲವೆಂದು ಉಲ್ಲೇಖಿಸಲಾಗಿದೆ. ಹೀಗಾಗಿ ವಿವಿಧ ಇಲಾಖೆಗಳಲ್ಲಿ ಆಗಿರುವ ಹಗರಣಗಳನ್ನು ಕಿರುಹೊತ್ತಿಗೆ ರೂಪದಲ್ಲಿ ತರಲಾಗಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಲೆಕ್ಕ ನೀಡಬೇಕು. ಈ ಬಗ್ಗೆ ಕೂಡಲೇ ಸಿಎಂ ಎಚ್‍ಡಿಕೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಪಟ್ಟುಹಿಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *