ನವದೆಹಲಿ: ದೆಹಲಿಯಲ್ಲಿ (Delhi) ಕೇಂದ್ರ ಸಚಿವ ಸೋಮಣ್ಣ (V.Somanna) ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ರೆಬೆಲ್ ಬಣದ ನಾಯಕರು ಕಾಣಿಸಿಕೊಂಡಿದ್ದಾರೆ. ದೆಹಲಿಯಲ್ಲೇ ಇದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಮಾತ್ರ ಇತ್ತ ಸುಳಿಯದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಸಂದೇಶವನ್ನು ಸೋಮಣ್ಣ ಮೂಲಕ ಹೈಕಮಾಂಡ್ ನೀಡಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡುತ್ತೇವೆ. ಇದಕ್ಕೆ ಹೈಕಮಾಂಡ್ ವೇದಿಕೆ ಸಿದ್ಧ ಮಾಡುವುದಾಗಿ ಹೇಳಿದೆ. ರಾಜ್ಯಾಧ್ಯಕ್ಷ ಚುನಾವಣೆ ಮುಂಚೆಯೇ ನಮ್ಮ ಜೊತೆ ಚರ್ಚೆ ಮಾಡುತ್ತಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ನಡೆಯಬಹುದು ಎಂದಿದ್ದಾರೆ.
ಇನ್ನೂ ಪಕ್ಷದ ಭಿನ್ನಮತದ ಬಗ್ಗೆ ಮಾತಾಡಿರುವ ಶಾಸಕ ಸಿ.ಕೆ ರಾಮಮೂರ್ತಿ, ಪಕ್ಷದಲ್ಲಿ ಜಗಳ ಹೀಗೆ ಮುಂದುವರೆದ್ರೆ ಜನ ಅಟ್ಟಾಡಿಸಿಕೊಂಡು ಹೊಡೆಯೋ ಪರಿಸ್ಥಿತಿ ಬರುತ್ತೆ ಎಂದು ಎಚ್ಚರಿಸಿದ್ದಾರೆ.