‘ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ’- 16 ವರ್ಷದ ಹಿಂದಿನ ಮನಮನೋಹನ್ ಸಿಂಗ್ ವಿಡಿಯೋ ವೈರಲ್

Public TV
2 Min Read
Manmohan Singh 1

ನವದೆಹಲಿ: ಪೌರತ್ವದ ಕಾಯ್ದೆ ಜಾರಿಗೆ ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಈ ಮಧ್ಯೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಂತೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ, 2003ರ ಡಿಸೆಂಬರ್ 15 ರಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಮನಮೋಹನ್ ಸಿಂಗ್ ಮಾತನಾಡುತ್ತಾ, ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಕಿರುಕುಳವನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಲ್ಲಿ ಉದಾರವಾದಿ ಮಾರ್ಗವನ್ನು ಅನುಸರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈಗ ಪೌರತ್ವ ಕಾಯ್ದೆ ಜಾರಿಗೆ ತರುವ ಮೂಲಕ ಅವರಿಗೆ ನೆರವಾಗುತ್ತಿದ್ದೇವೆ ಎಂದು ಬರೆದುಕೊಂಡಿದೆ.

L K Advani

ಮಾಜಿ ಪ್ರಧಾನಿ ಹೇಳಿದ್ದೇನು?
ಮೇಡಂ (ಅಂದಿನ ಸ್ಪೀಕರ್ ನಜ್ಮಾ ಹೆಪ್ತುಲ್ಲಾ), ನಾನು ಪೌರತ್ವ ಕಾಯ್ದೆ ವಿಷಯವಾಗಿ ಮಾತನಾಡಲು ಬಯಸುತ್ತೇನೆ. ನಮ್ಮ ದೇಶ ವಿಭಜನೆಯ ನಂತರ ಬಾಂಗ್ಲಾದೇಶದಂತಹ ದೇಶಗಳಲ್ಲಿನ ಅಲ್ಪಸಂಖ್ಯಾತರು ಕಿರುಕುಳವನ್ನು ಎದುರಿಸಿದ್ದಾರೆ. ಅವರು ನಮ್ಮ ದೇಶದಲ್ಲಿ ಆಶ್ರಯ ಪಡೆಯಲು ಮುಂದಾಗುತ್ತಿದ್ದಾರೆ. ಅಂತವರಿಗೆ ಪೌರತ್ವ ನೀಡುವಲ್ಲಿ ದೇಶವು ಉದಾರವಾಗಿರಬೇಕು ಎಂಬುದು ನಮ್ಮ ನೈತಿಕ ಬಾಧ್ಯತೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು.

ಅಂದಿನ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಮನಮೋಹನ್ ಸಿಂಗ್ ಅವರು, ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಭವಿಷ್ಯದ ಕ್ರಮಗಳನ್ನು ರೂಪಿಸುವಲ್ಲಿ ಗೌರವಾನ್ವಿತ ಉಪ ಪ್ರಧಾನಿ ಅವರು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು.

ಪೌರತ್ವ ಕಾಯ್ದೆ ವಿರುದ್ಧ ಆಕ್ರಮಣಕಾರಿಯಾಗಿ ಪ್ರತಿಭಟಿಸುತ್ತಿರುವ ನಮ್ಮ ತಡೆಯಲು ಬಿಜೆಪಿ ಈ ವಿಡಿಯೋವನ್ನು ಬಳಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಪೌರತ್ವ ಕಾಯ್ದೆಯ ಸಾಂವಿಧಾನಿಕಾ ಮಾನ್ಯತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿವೆ.

ಪೌರತ್ವ ಮಸೂದೆಯ ಚರ್ಚೆಯ ವೇಳೆ ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಕಾಂಗ್ರೆಸ್ ನಾಯಕರೇ ಈ ಮೂರು ದೇಶಗಳ ಅಲ್ಪಸಂಖ್ಯಾತರ ರಕ್ಷಣೆ ಮಾಡಲು ಪೌರತ್ವ ಕಾಯ್ದೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ವೇಳೆ ಮನಮೋಹನ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಇಲ್ಲಿಯವರೆಗಿದ್ದ ಸರ್ಕಾರ ಪೌರತ್ವ ಕಾಯ್ದೆ ತರಲು ಧೈರ್ಯ ತೋರಲಿಲ್ಲ. ಆದರೆ ಈಗ ಮೋದಿ ಸರ್ಕಾರ ಧೈರ್ಯ ಮಾಡಿ ಪೌರತ್ವ ಕಾಯ್ದೆ ಜಾರಿಗೆ ತರುತ್ತಿದೆ. ಕಾಂಗ್ರೆಸ್ ನಾಯಕರ ಆಶಯದಂತೆ ನಾವು ನಡೆದುಕೊಂಡಿದ್ದೇವೆ. ಆದರೆ ಯಾಕೆ ನಮ್ಮನ್ನು ವಿರೋಧ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಕಾಂಗ್ರೆಸ್ಸಿನವರು ಏನೇ ಮಾಡಿದರೂ ಅದು ಜಾತ್ಯಾತೀತತೆ ಆಗುತ್ತದೆ. ಆದರೆ ನಾವು ಜಾರಿಗೆ ತಂದರೆ ಕೋಮುವಾದಿಗಳಾಗುತ್ತೇವೆ ಎಂದು ಹೇಳಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

amit shah

Share This Article
Leave a Comment

Leave a Reply

Your email address will not be published. Required fields are marked *