ಬೆಂಗಳೂರು: ವಕ್ಫ್ (Waqf Board) ವಿಚಾರದಲ್ಲಿ ಬಿಜೆಪಿ (BJP) ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಸಚಿವ ಮಹದೇವಪ್ಪ (H.C. Mahadevappa) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ ಪ್ರತಿಭಟನೆ. ಸಿಎಂ ಅವರೇ ನೋಟಿಸ್ ವಾಪಸ್ ಪಡೆಯೋಕೆ ಹೇಳಿದ್ದಾರೆ. ಅಲ್ಲಿಗೆ ವಿಷಯ ಮುಗಿದಿದೆ. ಬಿಜೆಪಿಯವರು ಇದ್ದಾಗಲೇ ನೋಟಿಸ್ ಕೊಟ್ಟಿದ್ದರು. ಬಿಜೆಪಿಯವರಿಗೆ ಇಷ್ಟು ಕಾಳಜಿ ಇದ್ದರೆ ಅವತ್ತೇ ಈ ವಿಷಯ ಸರಿ ಮಾಡಬಹುದಿತ್ತು. ಅವರು ಮಾಡದೇ ಈಗ ಸರಿ ಮಾಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ರೈತರಿಗೆ ಯಾವುದೇ ತೊಂದರೆ ಆಗಬಾರದು. ನಮ್ಮ ಸರ್ಕಾರ ಯಾರಿಗೂ ತೊಂದರೆ ಕೊಡೋದಿಲ್ಲ. ಪಹಣಿಗೆ ಎಲ್ಲಾ ಇತಿಹಾಸ ಇರುತ್ತದೆ. ಅದನ್ನು ನೋಡಿದ್ರೆ ಗೊತ್ತಾಗುತ್ತದೆ. ರೆಕಾರ್ಡ್ ಇರೋ ಪ್ರಕಾರ ಆಗುತ್ತದೆ. ರೈತರನ್ನ ಒಕ್ಕಲು ಎಬ್ಬಿಸಬಾರದು ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರು ಯಾವತ್ತು ಇಶ್ಯು ಮೇಲೆ ದೇಶದಲ್ಲಿ ಹೋರಾಟ ಮಾಡಿಯೇ ಇಲ್ಲ. ಸೂಕ್ಷ್ಮ ವಿಷಯ, ಭಾವನಾತ್ಮಕ ವಿಷಯಗಳ ಮೇಲೆ ಪ್ರತಿಭಟನೆ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
PTCL ಕಾಯ್ದೆ ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಆಗ ಬಿಜೆಪಿ ಅವರು ಏನ್ ಮಾಡಿದ್ರು. ದಲಿತರ ಪರ ಏನು ಮಾಡಲಿಲ್ಲ. ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರ PTCL ಕಾಯ್ದೆ ವಾಪಸ್ ತಂತು. ಬಿಜೆಪಿಯವರು ಅಂದು ಏನು ಮಾತಾಡಲಿಲ್ಲ. ಹಾಗಾದ್ರೆ ದಲಿತರು ರೈತರಲ್ವಾ? PTCL ಕಾಯ್ದೆ ಪರ ಯಾಕೆ ಬಿಜೆಪಿ ಬಂದೇ ಇಲ್ಲ. ಈಗ ಏಕಾಏಕಿ ರೈತರ ಬಗ್ಗೆ ಕಾಳಜಿ ಬಂತಾ? ಎಂದು ಪ್ರಶ್ನಿಸಿದ್ದಾರೆ.
ನೋಟಿಸ್ ನೀಡಿರೋ ವಿಚಾರ ಸರ್ಕಾರದ ಗಮನಕ್ಕೆ ಬಂದ ಕೂಡಲೇ ಸಿಎಂ ಅವರೇ ಖುದ್ದು ಆದೇಶ ಮಾಡಿದ್ದಾರೆ. ಹೀಗಿದ್ರು ಬಿಜೆಪಿಯವರು ಅನವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಜನಪರ ನಿಲುವು ಇಲ್ಲ. ಧರ್ಮ, ಜಾತಿ ಪ್ರಚೋದನೆ ಮಾಡಿ ರಾಜಕೀಯ ಮಾಡ್ತಾರೆ. ಇಂತಹ ಬಿಜೆಪಿ ಅವರಿಗೆ ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ. ಮುಂದೆ ಜನರಿಗೆ ಎಲ್ಲಾ ಅರ್ಥ ಆಗಲಿದೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.