ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಜನಪ್ರತಿನಿಧಿಗಳ ಸಮಾವೇಶ ನಡೆಯಲಿದ್ದು, ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳಲಿದ್ದಾರೆ.
ಜಿಲ್ಲೆಯ ಮುರುಘಾಮಠದ ಅನುಭವ ಮಂಟಪ ಸಭಾಂಗಣದಲ್ಲಿ ಈ ಸಮಾವೇಶ ನಡೆಯಲಿದ್ದು, ಜೆ.ಪಿ. ನಡ್ಡಾ ಅವರು ಮಧ್ಯಾಹ್ನ ಸುಮಾರು 3:45ಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್.ಜೆ.ಎಮ್ ಆಂಗ್ಲ ಮಾಧ್ಯಮ ಶಾಲೆ ಆವರಣದ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 4 ಗಂಟೆಗೆ ಮುರುಘಾಮಠಕ್ಕೆ ಭೇಟಿ ನೀಡಿ, ಡಾ.ಶಿವಮೂರ್ತಿ ಮುರುಘಾ ಶರಣರ ದರ್ಶನ ಪಡೆಯಲಿದ್ದಾರೆ.
ನಂತರ 4:10ಕ್ಕೆ ರಾಜ್ಯಮಟ್ಟದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಭಾಗಿ ಆಗಲಿದ್ದು, 5:20ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸ್ಥಳೀಯ ಬಿಜೆಪಿ ಶಾಸಕರು ಭಾಗಿ ಆಗಲಿದ್ದಾರೆ. ಇದನ್ನೂ ಓದಿ: ಉಗ್ರರಿಂದ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಹತ್ಯೆ
ಕೋಟೆನಾಡಿನಿಂದ 2023ರ ಚುನಾವಣೆಗೆ ಬಿಜೆಪಿ ರಣಕಹಳೆ ಊದಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ಸದ್ಯ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲದೇ ಚಿತ್ರದುರ್ಗ ಲೋಕಸಭೆ ಕ್ಷೇತ್ರವನ್ನೂ ಬಿಜೆಪಿ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಕೇಸರಿಪಡೆಯ ಭದ್ರಕೋಟೆಯಾದ ಕೋಟೆನಾಡಿನಿಂದ ಮತ್ತೊಮ್ಮೆ ಕಹಳೆ ಊದಲು ಸಜ್ಜಾಗಿದೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ – ಬೆಂಗ್ಳೂರಿಗೊಂದು ಮೈಸೂರಿಗೊಂದು ರೂಲ್ಸ್