– ಅಬಕಾರಿ ಇಲಾಖೆಗೆ ಸರ್ಕಾರದಿಂದ 40,000 ಕೋಟಿ ಟಾರ್ಗೆಟ್ ಕೊಟ್ಟಿದ್ದಾರೆ
– ರೈತರ ಹೋರಾಟಕ್ಕೆ ಸಿಎಂ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ ಅಂತ ಕಿಡಿ
ನವದೆಹಲಿ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಮಿತ್ ಶಾ (Amit Shah) ಅವರ ಸಂಪರ್ಕದಲ್ಲಿದ್ದಾರೆ ಅನ್ನೋದು ಸತ್ಯಕ್ಕೆ ದೂರದ ಮಾತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ 2 ವರ್ಷ ಪೂರೈಸಿದ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನ ಇಂದು ದೆಹಲಿಯಲ್ಲಿ ಭೇಟಿಯಾದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಡಿಕೆ ಶಿವಕುಮಾರ್ (DK Shivakumar), ಅಮಿತ್ ಶಾ ಸಂಪರ್ಕದಲ್ಲಿರುವುದು ಸತ್ಯಕ್ಕೆ ದೂರದ ಮಾತು ಅಂತ ಸ್ಪಷ್ಟನೆ ನೀಡಿದರು. ಅಲ್ಲದೇ ರಾಜ್ಯಾಧ್ಯಕ್ಷರ ಬದಲಾವಣೆ ಸದ್ಯಕ್ಕೇನಿಲ್ಲ, ಎಲ್ಲರನ್ನೂ ಭೇಟಿಯಾಗುತ್ತಿದ್ದೇನೆ. ಏನೇ ಸಮಸ್ಯೆಯಿದ್ದರೂ ಜೀರ್ಣಿಸಿಕೊಂಡು ಕಾರ್ಯಕರ್ತರ ಮಧ್ಯೆ ದುಡಿಯುತ್ತೇನೆ. ಸಣ್ಣಪುಟ್ಟ ಸಮಸ್ಯೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಯಾವ ವರ್ಗದ ಜನಕ್ಕೂ ನ್ಯಾಯ ಸಿಕ್ಕಿಲ್ಲ
ಮುಂದುವರಿದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದೆ. ಪ್ರಣಾಳಿಕೆಯಲ್ಲಿನ ಎಲ್ಲ ಘೋಷಣೆ ಅನುಷ್ಠಾನಗೊಳಿಸಿದ್ದೇವೆ. ನಮ್ಮದೊಂದು ಮಾದರಿ ಸರ್ಕಾರ ಅಂತ ಹೇಳಿಕೊಳ್ತಿದ್ದಾರೆ. ಆದ್ರೆ ಎರಡೂವರೆ ವರ್ಷ ಪೂರೈಸಿರೋದೇ ದೊಡ್ಡ ಸಾಧನೆ. ಯಾವ ವರ್ಗದ ಜನರಿಗೂ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ತಿವಿದರು.
ಜನರು ಬಳಸುವ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಬಂದಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ರೈತರ ಬಗ್ಗೆ ಇಷ್ಟು ನಿರ್ಲಕ್ಷ್ಯ ತೋರಿದ ಮತ್ತೊಂದು ಸರ್ಕಾರ ಇಲ್ಲ. ಇತ್ತೀಚೆಗೆ ಕಬ್ಬು ಬೆಳೆಗಾರರ ಹೋರಾಟ ನೋಡಿದ್ರಿ. ರೈತರು ಹೋರಾಟ ಮಾಡಬೇಕಾದ್ರೆ ಅಲ್ಲೇ ಇರುವ ಉಸ್ತುವಾರಿ ಸಚಿವರು ಸ್ಥಳಕ್ಕೆ ಹೋಗಲಿಲ್ಲ. ಸಿಎಂ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ. ನಾವು ಹೋರಾಟಕ್ಕೆ ಧುಮುಕಿದ ಬಳಿಕ ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರನ್ನ ಸಭೆಗೆ ಕರೆತರಲಾಯಿತು ಎಂದು ಹೇಳಿದರು.

ಅಬಕಾರಿ ಇಲಾಖೆಗೆ 40,000 ಕೋಟಿ ಟಾರ್ಗೆಟ್
ಪರಪ್ಪನ ಅಗ್ರಹಾರದಲ್ಲಿ ಉಗ್ರರು ಮೋಜು ಮಾಡುತ್ತಾ, ಅಟ್ಟಹಾಸ ಮೆರೆಯುತ್ತಿದ್ದಾರೆ. ಕೊಲೆ ಸುಲಿಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಆದಾಗ್ಯೂ ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕಳೆದ ಎರಡು ವರ್ಷದಲ್ಲಿ ಯಾವ ಹೊಸ ಯೋಜನೆ ಘೋಷಣೆಯಾಗಿದೆ? ಅಧಿಕಾರಿಗಳು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಂಳ ನೀಡಲು ಖಜಾನೆಯಲ್ಲಿ ಹಣ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಹೆಂಡ ಕುಡಿಸಿ ಬೊಕ್ಕಸಕ್ಕೆ ಹಣ ತುಂಬಿಸುವ ಕೆಲಸ ಆಗಿದೆ. ಈಗ 40,000 ಕೋಟಿ ರೂಪಾಯಿ ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಲಾಗಿದೆ. ನಿಮ್ಮ ಭರವಸೆಗಳ ಮೇಲೆ ನಂಬಿಕೆ ಇಟ್ಟು ಜನರು ಅಧಿಕಾರ ನೀಡಿದ್ರೆ, ನೀವು ಅಬಕಾರಿ ಟಾರ್ಗೆಟ್ ಹೆಚ್ಚು ಮಾಡುತ್ತಿದ್ದೀರಿ, ಖಜಾನೆಗೆ ಹಣ ತುಂಬಿಸಲು ಜನರಿಗೆ, ಬಡವರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
