ಶಿವಮೊಗ್ಗ: ಕೇಂದ್ರ ಸರ್ಕಾರ ದೇಶದ ಬಡವರು, ರೈತರು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಮಂಡಿಸಿರುವ ಬಜೆಟ್ (Union Budget 2026) ಇದಾಗಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (B.Y. Vijayendra) ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಈ ವೇಳೆ, ಕೇಂದ್ರದ ಬಜೆಟ್ ಭಾರತದ ಅಭಿವೃದ್ಧಿಗೆ ಪೂರಕವಾಗಿದೆ. ವಿಕಸಿತ ಭಾರತದ ಅಭಿವೃದ್ಧಿ ಶೀಲ ಭಾರತದ ಸಂಕಲ್ಪಕ್ಕೆ ಪೂರಕವಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ, ಐಟಿ, ಬಿಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಒತ್ತು ಕೊಡಲಾಗಿದೆ.

ಯುವ ಹಾಗೂ ಕ್ರೀಡಾ ಕ್ಷೇತ್ರಕ್ಕೆ, ನಾರಿ ಶಕ್ತಿಗೆ ಹೆಚ್ಚು ಒತ್ತು ನೀಡಲಾಗಿದೆ. ಅದರ ಜೊತೆ ತೆರಿಗೆಗೆ ಹೆಚ್ಚು ಒತ್ತು ನೀಡದೇ ಸರ್ವಸ್ಪರ್ಶಿ ಯೋಜನೆಗೆ ಒತ್ತು ನೀಡಲಾಗಿದೆ. ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಪೂರಕವಾಗಿ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಗಮನ ಕೊಡಲಾಗಿದೆ.
ಕರ್ನಾಟಕಕ್ಕೆ ಮಹತ್ವದ ಯೋಜನೆಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದು ಕೇವಲ ಟೀಕೆಯಾಗಿದೆ. ಟೀಕೆ ಮಾಡುವುದೇ ಸಿದ್ಧರಾಮಯ್ಯನವರ ಸರ್ಕಾರದ ಸಾಧನೆಯಾಗಿದೆ. ಜಾಗತಿಕ ಸಂಕಷ್ಟದ ಕಾಲಘಟ್ಟದಲ್ಲಿ ನಾವೆಲ್ಲರೂ ಇದ್ದೆವೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ದೇಶದ ಜನರು ಬಜೆಟ್‍ನ್ನು ಸ್ವಾಗತಿಸಿದ್ದಾರೆ.
ನೂತನವಾಗಿ ನಿರ್ಮಾಣವಾಗಿರುವ ಕರ್ತವ್ಯ ಭವನದಲ್ಲಿ ಬಜೆಟ್ ತಯಾರಿಯಾಗಿರುವುದು ವಿಶೇಷವಾಗಿದೆ. 9 ಬಜೆಟ್ ನೀಡುವುದರ ಮೂಲಕ ನಿರ್ಮಲಾ ಸೀತಾರಾಮನ್ ಅವರು ಹೊಸ ದಾಖಲೆ ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.
ಕರ್ನಾಟಕಕ್ಕೆ ಪ್ರತ್ಯಕ್ಷ & ಪರೋಕ್ಷವಾಗಿ ಸಿಕ್ಕಿದ್ದೇನು?
* ಹೈ-ಸ್ಪೀಡ್ ರೈಲ್ ಕಾರಿಡಾರ್‌ಗಳು
ಹೈದರಾಬಾದ್- ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ಮಾರ್ಗಗಳಲ್ಲಿ ಹೈ-ಸ್ಪೀಡ್ ರೈಲುಗಳ ಅಭಿವೃದ್ಧಿ.
* ಟರ್ಟಲ್ ಟ್ರೈಲ್ಸ್ (ಕಡಲಾಮೆ ಮಾರ್ಗಗಳು)
ಒಡಿಶಾ, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಕಡಲಾಮೆಗಳ ಮೊಟ್ಟೆಯಿಡುವ ಸ್ಥಳಗಳಲ್ಲಿ ಪ್ರಕೃತಿ-ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ. ಇದು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.
* ಗಂಧದ ಮರಗಳ ಪುನರುಜ್ಜೀವನ ಯೋಜನೆ
ಶ್ರೀಗಂಧದ ಉದ್ಯಮ ಪುನರುಜ್ಜೀವನಗೊಳಿಸುವ ವಿಶೇಷ ಯೋಜನೆ, ರಾಜ್ಯದಲ್ಲಿ ಶ್ರೀಗಂಧ ಬೆಳೆಯುವ ರೈತರಿಗೆ ಅನುಕೂಲ
* ಕೋಕೋ ಮತ್ತು ತೆಂಗು ಬೆಳಗಾರರಿಗೆ ವಿಶೇಷ ಯೋಜನೆ
ಕೋಕೋ ಮತ್ತು ತೆಂಗು ಉತ್ಪನ್ನಗಳಿಗೆ ವಿಶೇಷ ಯೋಜನೆಗಳು. ತೆಂಗು ಉತ್ಪಾದನೆಯನ್ನು ಹೆಚ್ಚಿಸಲು ಮೂರು ಕೋಟಿ ಫಲಾನುಭವಿಗಳಿಗೆ ನಿಧಿ ನೀಡಲಾಗುತ್ತದೆ. ಇದು ತುಮಕೂರು, ಮಂಗಳೂರು, ಉಡುಪಿ ಮತ್ತು ಕಾರವಾರ ಪ್ರದೇಶಗಳ ರೈತರಿಗೆ ಪ್ರಯೋಜನಕಾರಿ.
* ಕರಾವಳಿ ಪ್ರದೇಶಗಳಲ್ಲಿ ಪರ್ವತಾರೋಹಣ
ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಮೌಂಟೇನ್ ಟ್ರೆಕ್ಕಿಂಗ್‌ಗೆ ಅನುಮತಿ, ಇದು ಪ್ರವಾಸೋದ್ಯಮ ಉತ್ತೇಜಿಸುತ್ತದೆ
* ರಾಜ್ಯಗಳಿಗೆ ಹಣಕಾಸು ಆಯೋಗದ ಅನುದಾನ
ಎಲ್ಲಾ ರಾಜ್ಯಗಳಿಗೆ (ಕರ್ನಾಟಕ ಸೇರಿದಂತೆ) 1.4 ಲಕ್ಷ ಕೋಟಿ ರೂ. ಅನುದಾನ. ಇದರಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿಪತ್ತು ನಿರ್ವಹಣೆಗೆ ನಿಧಿ ಸೇರಿದೆ.
* ಸಿಟಿ ಇಕನಾಮಿಕ್ ರೀಜನ್‌ಗಳು
ಪ್ರತಿ CERಗೆ 5 ವರ್ಷಗಳಲ್ಲಿ 5,000 ಕೋಟಿ ರೂ. ಹಂಚಿಕೆ. ಟೈರ್-2 ಮತ್ತು ಟೈರ್-3 ನಗರಗಳ ಅಭಿವೃದ್ಧಿಗೆ ಗಮನ, ಇದರಡಿ ಕರ್ನಾಟಕದಲ್ಲಿನ ಎರಡು ಮತ್ತು ಮೂರನೇ ಹಂತದ ನಗರಗಳು ಪ್ರಯೋಜನ ಪಡೆಯಬಹುದು.
* MSME ಗ್ರೋತ್ ಫಂಡ್:
10,000 ಕೋಟಿ ರೂ. ನಿಧಿ ಮೀಸಲಿಟ್ಟಿದ್ದು ಇದು ಕರ್ನಾಟಕದ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬೆಂಬಲಿಸುತ್ತದೆ
* ರಾಷ್ಟ್ರೀಯ ಟೆಕ್ಸ್ಟೈಲ್ ಪಾಲಿಸಿ ಮತ್ತು ಮೆಗಾ ಟೆಕ್ಸ್ಟೈಲ್ ಪಾರ್ಕ್‌ಗಳು
ಟೆಕ್ಸ್ಟೈಲ್ ಉದ್ಯಮವನ್ನು ಉತ್ತೇಜಿಸುವ ಯೋಜನೆಗಳು, ಕರ್ನಾಟಕದ ಟೆಕ್ಸ್ಟೈಲ್ ಹಬ್‌ಗಳಿಗೆ ಪ್ರಯೋಜನ
* ಮಹಿಳಾ ಸಬಲೀಕರಣ ಯೋಜನೆಗಳು
‘ಸ್ಟ್ರೀ ಮಾರ್ಟ್’ ಯೋಜನೆ ಮತ್ತು ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಸತಿ ಸೌಲಭ್ಯಗಳ ರಾಜ್ಯಕ್ಕೂ ದೊರೆಯಲಿದೆ
* ಇತರ ರಾಷ್ಟ್ರೀಯ ಯೋಜನೆಗಳು: ಸೆಮಿಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ಸ್ ಕಾಂಪೋನೆಂಟ್ ಉತ್ಪಾದನೆಗೆ 40,000 ಕೋಟಿ ರೂ., ಬಯೋಫಾರ್ಮಾ ಶಕ್ತಿ ಯೋಜನೆಗೆ 10,000 ಕೋಟಿ ರೂ., ಕರ್ನಾಟಕದ ಟೆಕ್ ಮತ್ತು ಫಾರ್ಮಾ ಹಬ್‌ಗಳಿಗೆ ಪರೋಕ್ಷ ಪ್ರಯೋಜನ.

