ಬೆಂಗಳೂರು: ಈ ಬಾರಿಯ ಕರ್ನಾಟಕ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಹೂಡಿದ ಅಹಿಂದ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ಎಸ್‍ಟಿ, ಎಸ್‍ಸಿ ವೋಟ್ ಬ್ಯಾಂಕ್ ಅನ್ನು ತನ್ನತ್ತ ಸೆಳೆಯಲು ರಣತಂತ್ರ ರೂಪಿಸಿದೆ.
ಸಿದ್ದರಾಮಯ್ಯ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ ಸಮುದಾಯದ ಮತಗಳ ಮೇಲೆ ಹೆಚ್ಚಿನ ಕಣ್ಣಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ ಗೆ ಬೀಳಲಿರುವ ಈ ಮತಗಳನ್ನು ಒಡೆದು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಡಿಸಿಎಂ ಕಾರ್ಡ್ ಪ್ಲೇ ಮಾಡಲು ಮುಂದಾಗಿದೆ.
ಹೌದು. ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈಗ ಉಪಮುಖ್ಯಮಂತ್ರಿಯಾಗಿ ಎಸ್‍ಸಿ ಅಥವಾ ಎಸ್‍ಟಿ ಸಮುದಾಯದ ನಾಯಕರ ಹೆಸರನ್ನು ಬಿಡಲು ಚಿಂತನೆ ನಡೆಸಿದೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಸದ್ಯ ಕಮಲ ಪಾಳೆಯದಲ್ಲಿ ಎಸ್‍ಟಿ ಸಮುದಾಯದಲ್ಲಿ ಶ್ರೀರಾಮುಲು, ದಲಿತ ಸಮುದಾಯದ ಗೋವಿಂದ ಕಾರಜೋಳ ಹೆಸರು ಬಿಡಲು ಚರ್ಚೆ ನಡೆಯುತ್ತಿದೆ. ಶ್ರೀರಾಮುಲು ಕಾರ್ಡ್ ಪ್ಲೇ ಮಾಡಿದ್ರೆ 4, 5 ಜಿಲ್ಲೆಗಳಲ್ಲಿ ಅನುಕೂಲವಾಗಲಿದೆ ಎನ್ನುವ ನಿರೀಕ್ಷೆಯ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ತಂತ್ರ ಹೆಣೆಯಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಎಲ್ಲ 224 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಕೇಂದ್ರ ನಾಯಕರುಗಳು ಪ್ರಚಾರವನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಸ್ಥಾನದ ಘೋಷಣೆ ಮಾಡುವ ಸಾಧ್ಯತೆಯಿದೆ. ಬಿಜೆಪಿ ಈ ಗೇಮ್ ಅಧಿಕೃತವಾಗಿ ಆಡದೇ ಇದ್ದರೂ ತೆರೆಯ ಹಿಂದೆ ಆಟ ಆಡುವ ಸಾಧ್ಯತೆಯಿದೆ.