Connect with us

Bengaluru City

ಮುಂಬರೋ ಚುನಾವಣೆಗೆ ಬಿಜೆಪಿ ರಣಕಹಳೆ – ಬೆಂಗ್ಳೂರಲ್ಲಿ ಬೈಕ್ ರ‍್ಯಾಲಿಗೆ ಪ್ಲಾನ್

Published

on

ಬೆಂಗಳೂರು: ಮಂಗಳೂರು ಚಲೋ ಬೈಕ್ ಜಾಥಾ ವಿಫಲವಾದ ಬೆನ್ನಲ್ಲೇ ಮತ್ತೊಂದು ಬೈಕ್ ಜಾಥಾ ನಡೆಸಲು ರಾಜ್ಯ ಬಿಜೆಪಿ ನಾಯಕರು ಚಿಂತಿಸಿದ್ದಾರೆ.

ರಾಜ್ಯದಲ್ಲಿ ಮತ್ತೊಂದು ಜಾಥಾ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಭಾನುವಾರ ರಾತ್ರಿ ನವದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ನಿವಾಸದಲ್ಲಿ ನಡೆಸಲಾದ ಕೋರ್ ಕಮೀಟಿ ಸಭೆಯಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಅಕ್ಟೋಬರ್ 2ರಂದು ಕರ್ನಾಟಕ ಪರಿವರ್ತನಾ ಜಾಥಾ ಆರಂಭಿಸಲು ಯೋಚಿಸಿದ್ದು, ಬೆಂಗಳೂರಿನಿಂದ ಪರಿವರ್ತನಾ ಯಾತ್ರೆ ಆರಂಭಿಸುವ ಇರಾದೆಯನ್ನು ನಾಯಕರು ಹೊಂದಿದ್ದಾರೆ. ಅಂದು ಸುಮಾರು ಒಂದು ಲಕ್ಷ ಬೈಕ್ ಗಳನ್ನು ರೋಡಿಗಿಳಿಸಿ ಬಲಪ್ರದರ್ಶನ ಮಾಡಬೇಕು ಎಂದು ಭಾನುವಾರ ನಡೆದ ಸಭೆಯಲ್ಲಿ ರಾಜ್ಯದ ನಾಯಕರು ಚರ್ಚಿಸಿದ್ದಾರೆ.

ಉತ್ತರಪ್ರದೇಶ ಚುನಾವಣಾ ಮಾದರಿಯಲ್ಲಿ ರಾಜ್ಯದಲ್ಲೂ ಚುನಾವಣಾ ಪ್ರಚಾರಕ್ಕೆ ಬೈಕ್ ಬಳಸಿಕೊಳ್ಳಲು ನಿರ್ಧರಿಸಿದ್ದು, ಬೆಂಗಳೂರಿನಿಂದ ತುಮಕೂರುವರೆಗೂ ಮೊದಲ ಹಂತದಲ್ಲಿ ಪರಿವರ್ತನಾ ಯಾತ್ರೆ ನಡೆಸಲು ಪ್ಲಾನ್ ನಡೆಸಲಾಗುತ್ತಿದೆ. ಈ ಮಾರ್ಗದ ಬಗ್ಗೆ ತೀರ್ಮಾನ ಇನ್ನೂ ಅಂತಿಮವಾಗಿಲ್ಲ. ಒಂದು ವೇಳೆ ಈ ಮಾರ್ಗ ಅಂತಿಮವಾದ್ರೆ ತುಮಕೂರುವರೆಗೂ ಬೈಕ್ ಜಾಥಾ ನಡೆಸುವ ಮೂಲಕ ಮಂಗಳೂರು ಬೈಕ್ ಜಾಥಾ ವೇಳೆ ಆದ ಡ್ಯಾಮೇಜ್ ಕಂಟ್ರೊಲ್ ಮಾಡಿಕೊಳ್ಳಬಹದು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 350 ಸ್ಥಾನ ಗೆಲ್ಲೋ ಲೆಕ್ಕಚಾರ ಹಾಕಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಧ್ಯಕ್ಷ ಅಮಿತ್ ಶಾ ಈಗಾಗಲೇ ರಣತಂತ್ರ ರೂಪಿಸುತ್ತಿದ್ದಾರೆ. ಗೆಲ್ಲಲು ಕಷ್ಟಕರವಾಗಿರುವ 125 ಕ್ಷೇತ್ರಗಳನ್ನು ಗುರುತಿಸಿದ್ದು, ಎರಡು ತಿಂಗಳ ಒಳಗಾಗಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಂತೆ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ. ಗೆಲ್ಲಲು ಕಷ್ಟಕರವಾದ ಕ್ಷೇತ್ರಗಳ ಪಟ್ಟಿಯಲ್ಲಿ ರಾಜ್ಯದ 8 ಲೋಕಸಭಾ ಕ್ಷೇತ್ರಗಳಿವೆ. ಇದರಿಂದಾಗಿ ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಸ್ಪರ್ಧಿಸಲು, ಅದಕ್ಕಾಗಿ ಸಿದ್ಧತೆ ನಡೆಸಲು ಅಭ್ಯರ್ಥಿಗಳಿಗೆ ಸಾಕಷ್ಟು ಸಮಯ ಸಿಗಲಿದೆ ಎಂಬುದು ಶಾ ಲೆಕ್ಕಾಚಾರ ಎನ್ನಲಾಗಿದೆ.

ಕೇಂದ್ರ ಸಚಿವರಾದ ಅನಂತ್ ಕುಮಾರ್, ಪ್ರಕಾಶ್ ಜಾವಡೇಕರ್, ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರಿಗೆ ಅಭ್ಯರ್ಥಿಯ ಆಯ್ಕೆ ಹೊಣೆಯನ್ನು ನೀಡಲಾಗಿದೆ. ಅಚ್ಚರಿಯ ಸಂಗತಿ ಅಂದ್ರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ರಾಯ್‍ಬರೇಲಿ ಮತ್ತು ಅಮೇಥಿ ಕ್ಷೇತ್ರಗಳು ಈ ಪಟ್ಟಿಯಲ್ಲಿಲ್ಲ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *

www.publictv.in