– ಕಣದಿಂದ ಹಿಂದೆ ಸರಿದ ಪಕ್ಷೇತರ ಅಭ್ಯರ್ಥಿ
ಬೆಂಗಳೂರು :ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡಿದ್ದ ಬಿಜೆಪಿ ವಿಧಾನ ಪರಿಷತ್ ಚುನಾವಣೆ ಗೆಲ್ಲೋಕೆ ಮತ್ತೆ ಆಪರೇಷನ್ ಅಸ್ತ್ರ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ದೋಸ್ತಿ ಪಕ್ಷೇತರ ಅಭ್ಯರ್ಥಿಯನ್ನೇ ಆಪರೇಷನ್ ಮಾಡುವ ಮೂಲಕ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಮಾಡಿದೆ. ಹೀಗಾಗಿ ಬಿಜೆಪಿಯ ಅಭ್ಯರ್ಥಿ ಡಿಸಿಎಂ ಲಕ್ಷ್ಮಣ ಸವದಿ ಗೆಲುವು ಸುಲಭವಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬೇಕು ಅಂತ ಕಾಂಗ್ರೆಸ್- ಜೆಡಿಎಸ್ ದೋಸ್ತಿಯಾಗಿ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಅವರನ್ನ ಕಣಕ್ಕೆ ಇಳಿಸಿದ್ರು. ಜೆಡಿಎಸ್ ನ ನಾಯಕ ಎಚ್.ಡಿ.ರೇವಣ್ಣ ಕಾಂಗ್ರೆಸ್ ನಾಯಕರ ಜೊತೆ ಮಾತಾಡಿ ಮೈತ್ರಿ ಅಭ್ಯರ್ಥಿ ಫೈನಲ್ ಮಾಡಿದ್ರು. ಆದ್ರೆ ಕೊನೆ ಘಳಿಗೆಯಲ್ಲಿ ಬೆಂಬಲ ಕೊಡೋಕೆ ಕಾಂಗ್ರೆಸ್ ಹಿಂದೇಟು ಹಾಕಿದೆ. ಹೀಗಾಗಿ ಸೋಲುವ ಭೀತಿಯಿಂದ ತಪ್ಪಿಸಿಕೊಳ್ಳಲು ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಯಾರಿಂದಲೂ ಬೆಂಬಲ ಸಿಗದ ಕಾರಣ ಹಾಗೂ ತಮ್ಮ ಗುರುಗಳ ಮಾರ್ಗದರ್ಶನದಿಂದ ಕಣದಿಂದ ಹಿಂದೆ ಸರಿಯೋದಾಗಿ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಅಷ್ಟಕ್ಕೂ ಈ ಆಪರೇಷನ್ ಹಿಂದೆ ಬಿಜೆಪಿಯ ಪ್ರಮುಖ ನಾಯಕರು ಇದ್ದಾರೆ ಎನ್ನಲಾಗ್ತಿದೆ. ಕಳೆದ 3-4 ದಿನಗಳಿಂದ ಬೆಜೆಪಿಯ ಹಲವು ಮುಖಂಡರು ಪಕ್ಷೇತರ ಅಭ್ಯರ್ಥಿ ಜೊತೆ ನಿರಂತರ ಮಾತುಕತೆ ನಡೆಸಿ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಯಶಸ್ವಿಯಾಗಿದ್ದಾರೆ. ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಈ ಆಪರೇಷನ್ ಪ್ರಮುಖ ರೂವಾರಿ ಎನ್ನಲಾಗ್ತಿದೆ. ರಾಮನಗರದ ಬಿಜೆಪಿ ಮುಖಂಡ ರುದ್ರೇಶ್ ಮೂಲಕ ಅನಿಲ್ ಕುಮಾರ್ ಜೊತೆ ಮಾತುಕತೆ ನಡೆಸಿ ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ಈ ಮೂಲಕ ಕಳೆದ ವರ್ಷ ನಡೆದ ರಾಮನಗರ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡಿದ್ದ ಡಿಕೆಶಿ ಬ್ರದರ್ಸ್ ಗೆ ಪಾಠ ಕಲಿಸಿದಂತೆ ಮಾಡಿದ್ದು, ಸೇಡಿಗೆ ಸೇಡು ತೀರಿಸಿಕೊಂಡಂತೆ ಆಗಿದೆ. ಒಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿಯ ಆಪರೇಷನ್ ನಿಂದ ಫೆಬ್ರವರಿ 17 ರಂದು ನಡೆಯುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸವದಿ ಗೆಲುವು ನಿಶ್ಚಿತವಾಗಿದೆ.