ನವದೆಹಲಿ: ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ (CP Radhakrishnan) ಅವರನ್ನು ಎನ್‌ಡಿಎ(NDA) ಉಪರಾಷ್ಟ್ರಪತಿ (Vice President) ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿದೆ.
ಇಂದು ಸಂಜೆ ಬಿಜೆಪಿ (BJP) ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಸಿಪಿ ರಾಧಾಕೃಷ್ಣನ್ ಹೆಸರನ್ನು ಅಂತಿಮಗೊಳಿಸಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರುವ ರಾಧಾಕೃಷ್ಣನ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.
LIVE: BJP National President Shri @JPNadda addresses a press conference at BJP headquarters, Delhi. https://t.co/EaWwMHN2ck
— BJP (@BJP4India) August 17, 2025
ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ಅಕ್ಟೋಬರ್ 20, 1957 ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ್ದಾರೆ. ರಾಧಾಕೃಷ್ಣನ್ ಅವರು ತಮ್ಮ ರಾಜಕೀಯ ಪ್ರಯಾಣದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಜುಲೈ 31, 2024 ರಂದು ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದಕ್ಕೂ ಮೊದಲು ಅವರು ಫೆಬ್ರವರಿ 18, 2023 ರಿಂದ ಜುಲೈ 30, 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರು ಮಾರ್ಚ್ ನಿಂದ ಜುಲೈ 2024 ರವರೆಗೆ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಮಾರ್ಚ್ ನಿಂದ ಆಗಸ್ಟ್ 2024 ರವರೆಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಕರ್ತವ್ಯಗಳನ್ನು ನಿರ್ವಹಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನ ಸಂಘದೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಇವರು 1998 ಮತ್ತು 1999 ರಲ್ಲಿ ಎರಡು ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಬಿಜೆಪಿಯ ತಮಿಳುನಾಡು ಅಧ್ಯಕ್ಷರಾಗಿದ್ದಾಗ ರಾಧಾಕೃಷ್ಣನ್ ಅವರು ನದಿಗಳ ಜೋಡಣೆ, ಭಯೋತ್ಪಾದನೆ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿದ 93 ದಿನಗಳ ರಥಯಾತ್ರೆ ನಡೆಸಿದ್ದರು.
ಸಂಸದರಾಗಿದ್ದಾಗ ಅವರು ಜವಳಿ ಸ್ಥಾಯಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸಂಬಂಧಿಸಿದ ಹಲವಾರು ಸಮಿತಿಗಳಿಗೆ ಕೊಡುಗೆ ನೀಡಿದ್ದಾರೆ.
ರಾಧಾಕೃಷ್ಣನ್ 16ನೇ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜನಸಂಘದೊಂದಿಗೆ ಸಂಬಂಧ ಹೊಂದಿದ್ದಾರೆ. ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಸೇರಿದಂತೆ ಎನ್‌ಡಿಎನ ಹಲವು ನಾಯಕರು ರಾಧಾಕೃಷ್ಣನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು
ಸೆಪ್ಟೆಂಬರ್ 9 ರಂದು ಭಾರತದ ಹೊಸ ಉಪರಾಷ್ಟ್ರಪತಿಯ ನೇಮಕಕ್ಕೆ ಸಂಬಂಧ ಚುನಾವಣೆ ನಡೆಯಲಿದೆ. ಇಲ್ಲಿಯವರೆಗೆ INDIA ಒಕ್ಕೂಟ ಅಭ್ಯರ್ಥಿ ಆಯ್ಕೆಯನ್ನು ಪ್ರಕಟಿಸಿಲ್ಲ.