ಬೆಂಗಳೂರು: ಆಪರೇಷನ್ ಕಮಲ ಇನ್ನೂ ಮುಗಿದಿಲ್ಲ ಹಾಗೂ ತಂತ್ರಗಾರಿಕೆಯನ್ನೂ ಬಿಡುತ್ತಿಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿವೆ.
ಸರ್ಕಾರ ಭದ್ರತೆಗಾಗಿ ಬಿಜೆಪಿ ಹೈಕಮಾಂಡ್ ಹೊಸ ಟಾರ್ಗೆಟ್ ಫಿಕ್ಸ್ ಮಾಡಿದ್ದು, ಅದನ್ನು ಟಾರ್ಗೆಟ್ 22 ಎಂದು ಕರೆಯಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಗುರಿ ತಪ್ಪುವಂತಿಲ್ಲ. ಒಂದು ವೇಳೆ ಟಾರ್ಗೆಟ್ ಕೈತಪ್ಪಿದರೆ ಕಷ್ಟ ಎಂದು ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬಿಜೆಪಿಗೆ 6 ತಿಂಗಳ ಸರ್ಕಾರ ಬೇಡ. ಮುಂದಿನ ಮೂರು ವರ್ಷ 10 ತಿಂಗಳ ನಾವು ಅಧಿಕಾರದಲ್ಲಿ ಇರಬೇಕು. ಈ 17 ಮಂದಿ ಜೊತೆಗೆ ಕನಿಷ್ಟ ಇನ್ನೂ 5 ಮಂದಿ ರಾಜೀನಾಮೆ ಕೊಡಬೇಕು. ಇದರಿಂದಾಗಿ ಕನಿಷ್ಟ ಅಂದರೂ 22 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ಆಗಬೇಕು. ಈ 22 ಕ್ಷೇತ್ರಗಳ ಪೈಕಿ ಬಿಜೆಪಿಯು 12 ಸೀಟು ಗೆಲ್ಲಲೇ ಬೇಕು. 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ 105+12 ಒಟ್ಟು 117 ಸೀಟುಗಳಿಗೆ ಬಲ ಹೆಚ್ಚುತ್ತದೆ. ಇದರಿಂದಾಗಿ ಬಿಜೆಪಿ ಸರ್ಕಾರ ಅವಧಿ ಪೂರ್ಣಗಳಿಸಲು ಅನುಕೂಲವಾಗುತ್ತದೆ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದೆ ಎಂಬ ಮಾತು ಕೇಳಿ ಬರುತ್ತಿದೆ.
ಸರ್ಕಾರ ರಚನೆ ಬೆನ್ನಲ್ಲೇ ಹೈಕಮಾಂಡ್ ಹೊಸ ಟಾರ್ಗೆಟ್ ಫಿಕ್ಸ್ ಮಾಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನೀಡಿದ ಹೊಸ ಟಾಸ್ಕ್ ಜಾರಿಗೆ ಬಿ.ಎಸ್ ಯಡಿಯೂರಪ್ಪ ಅವರು ಕೂಡ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.