ಅಗಲಿದ ಕಾಂಗ್ರೆಸ್ ನಾಯಕ ಆಸ್ಕರ್‌ಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

Public TV
2 Min Read
Oscar Fernandes 1 1

ಉಡುಪಿ: ಅಗಲಿದ ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್  ಫೆರ್ನಾಂಡಿಸ್ ಅವರಿಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಭಾರತೀಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಮೂಲಕ ಹೊಸ ತಲೆಮಾರಿನ ರಾಜಕೀಯ ನಾಯಕರು ಹಿರಿಯರು ಹಾಕಿದ್ದ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.

ಚುನಾವಣೆ ಸಂದರ್ಭ ರಾಜಕೀಯ, ಚುನಾವಣೆ ನಂತರ ನಾವೆಲ್ಲರೂ ಜನಪ್ರತಿನಿಧಿಗಳು. ಎಲೆಕ್ಷನ್ ಟೈಮಲ್ಲಿ ಕೆಸರೆರಚಾಟ ಚುನಾವಣೆ ಗೆದ್ದ ಮೇಲೆ ಮಿತ್ರತ್ವ. ಉಡುಪಿಯಲ್ಲಿ ಈ ಸಂಪ್ರದಾಯ ಇನ್ನೂ ಚಾಲ್ತಿಯಲ್ಲಿದೆ. ಕಾಂಗ್ರೆಸ್ ನ ಹಿರಿಯ ನಾಯಕ ಸುದೀರ್ಘ ನಾಲ್ಕು ದಶಕಗಳ ಕಾಲ ರಾಜಕೀಯವನ್ನೇ ಜೀವನ ಮಾಡಿಕೊಂಡಿದ್ದ ಆಸ್ಕರ್ ಫೆರ್ನಾಂಡಿಸ್ ಕೊನೆಯುಸಿರೆಳೆದಿದ್ದಾರೆ. ಉಡುಪಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಆಸ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

oscar fernandes3

ಉಡುಪಿ ಶಾಸಕ ಕೆ. ರಘುಪತಿ ಭಟ್ ನುಡಿನಮನ ಸಲ್ಲಿಸಿ, ನಮ್ಮ ವಿರೋಧ ಪಕ್ಷದವರಾದರೂ ಆಸ್ಕರ್ ಫೆರ್ನಾಂಡಿಸ್ ಉಡುಪಿಗೆ ನೀಡಿದ ಸೇವೆ ಸ್ಮರಿಸಬೇಕಾಗಿದೆ. ಇಂಥ ಸಂಸ್ಕೃತಿ ಉಡುಪಿ ಜಿಲ್ಲೆಯಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ರಾಜಕೀಯ ಸಿದ್ಧಾಂತವನ್ನು ಬಿಡದೇ ಬೇರೆ ಪಕ್ಷದ ಹಿರಿಯರು ನಿಧನರಾದಾಗ ಅವರಿಗೆ ನಮ್ಮ ಪಕ್ಷದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದು ನಮ್ಮ ಕರ್ತವ್ಯ. ಕಾರ್ಮಿಕ ಸಂಘಟನೆಗಳಿಂದ ಬೆಳೆದ ನಾಯಕರಾದ ಆಸ್ಕರ್, ಯಾವತ್ತೂ ಹಗೆತನದ ರಾಜಕೀಯ ಮಾಡಿದವರಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮಾಡಿದಾಗಲೂ ಆಸ್ಕರ್ ಅದನ್ನು ಬೆಂಬಲಿಸಿಲ್ಲ. ಡಾ.ಆಚಾರ್ಯ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು. ಇದನ್ನೂ ಓದಿ:  BJP, RSS ನಕಲಿ ಹಿಂದುಗಳು, ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Oscar Fernandes 2

ಅವರೊಬ್ಬ ಮಾನವೀಯ ಗುಣವಿದ್ದ ನಾಯಕ ಎಂದು ಗುಣಗಾನ ಮಾಡಿದರು. ನನ್ನ ವೈಯಕ್ತಿಕ ಜೀವನದಲ್ಲಿ ದುರ್ಘಟನೆ ಆದಾಗ ಸಾಂತ್ವನ ಹೇಳಿದ್ದರು. ಕಾಂಗ್ರೆಸ್ ಪಕ್ಷದವರು ನನ್ನನ್ನು ಟೀಕಿಸಿದಾಗಲೂ ಮಾನವೀಯ ಗುಣ ತೋರಿದ್ದರು. ಮಾನಸಿಕ ವೇದನೆಯಲ್ಲಿದ್ದಾಗ ನನ್ನ ಬಳಿಗೇ ಬಂದು ಸಾಂತ್ವನ ಹೇಳಿ, ಸಹಾಯ ಬೇಕಾದರೆ ಕೇಳಿ ಎಂದಿದ್ದರು. ಅವರ ಸಹಾಯಕ್ಕಿಂತಲೂ ಸಾಂತ್ವನದಿಂದ ನಾನು ಹಗುರಾಗಿದ್ದೆ. ಅತ್ಯಂತ ಒಳ್ಳೆಯ ಗುಣ ಹೊಂದಿದ್ದರು. ಅದೇ ಕಾರಣಕ್ಕೆ ಬೆಂಗಳೂರಿಂದ ಬಂದು ಅಂತಿಮ ದರ್ಶನ ಪಡೆದಿದ್ದೇನೆ ಎಂದು ಭಟ್ ಹೇಳಿದರು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಶ್ರದ್ಧಾಂಜಲಿ ಅರ್ಪಿಸಿ, ವಿರೋಧಿಗಳನ್ನು ಪ್ರೀತಿಸುವ ಗುಣ ಹೊಂದಿದ್ದರು. ಹಿಂದುತ್ವದ ವಿಶ್ವಾಸ ಮತ್ತು ಗೌರವವನ್ನು ಹೊಂದಿದ್ದರು. ಪಕ್ಷ ಮತ್ತು ನಾಯಕತ್ವದ ಮೇಲಿನ ನಿಷ್ಠೆಯನ್ನು ಆಸ್ಕರ್ ಅವರಿಂದ ಕಲಿಯಬೇಕು ಎಂದು ಹೇಳಿದರು. ಇದನ್ನೂ ಓದಿ:  ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ: ಸಿದ್ದರಾಮಯ್ಯ

Oscar Fernandes 1

ಡಾ. ವಿ.ಎಸ್. ಆಚಾರ್ಯರು ನಿಧನರಾದಾಗ ದಿಲ್ಲಿಯಲ್ಲಿದ್ದ ಆಸ್ಕರ್, ಕಾಂಗ್ರೆಸ್ ನಾಯಕರಿಗೆ ಕರೆ ಮಾಡಿ, ಕಾಂಗ್ರೆಸ್ ಭವನದಲ್ಲಿ ಡಾ. ಆಚಾರ್ಯರ ಭಾವಚಿತ್ರ ಇರಿಸಿ, ಶ್ರದ್ಧಾಂಜಲಿ ಸಲ್ಲಿಸುವಂತೆ ಸೂಚಿಸಿದ್ದರು. ಇಂದು ಆಸ್ಕರ್ ನಿಧನರಾದಾಗ ಸಚಿವ ಸುನೀಲ್ ಕುಮಾರ್ ಅವರು ಬಿಜೆಪಿ ನಾಯಕರಿಗೆ ಕರೆ ಮಾಡಿ, ಆಸ್ಕರ್ ಅವರಿಗೆ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲು ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *