ಬೆಂಗಳೂರು: ನನ್ನನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು. 5 ಕೋಟಿ ಹಣ ನೀಡಿ ಆಫರ್ ಕೊಟ್ಟಿತ್ತು ಎಂದು ಶಾಸಕ ಶ್ರೀನಿವಾಸ ಗೌಡ ಅವರು ಸದನದಲ್ಲಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.
ಸ್ಪೀಕರ್ ಅವರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ ಅವರು, ಶಾಸಕ ವಿಶ್ವನಾಥ್, ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಮೂವರು ಸೇರಿ ನಮ್ಮ ಮನೆಗೆ ನೇರವಾಗಿ 5 ಕೋಟಿ ತಂದು ಕೊಟ್ಟರು. ಆಗ ನಾನು ನಿರಾಕರಿಸಿದ್ದೆ. ನಾನು ತೆಗೆದುಕೊಳ್ಳಲ್ಲ ಎಂದರೂ ಹಣ ಇಟ್ಟು ಹೋದರು ಎಂದು ತಿಳಿಸಿದರು.
ಈ ಬಗ್ಗೆ ನಾನು ಬಹಳ ಜನಕ್ಕೆ ಹಿಂದೆಯೂ ಹೇಳಿದ್ದೇನೆ. ಅಲ್ಲದೆ 30 ಕೋಟಿ ಕೊಡುತ್ತೇವೆ ಬರುತ್ತೀರಾ ಎಂದು ಬಿಜೆಪಿಯವರು ನನ್ನ ಕೇಳುತ್ತಿದ್ದಾರೆ. ಇದಕ್ಕಾಗಿ ಜನ ನಮಗೆಲ್ಲಾ ವೋಟ್ ಹಾಕಿರೋದು? ಯಾವ ಅಧಿಕಾರಕ್ಕೆ ಜನ ಮತ ಹಾಕಿದ್ದಾರೆ? 224 ಮಂದಿ ಇಂದು ನಾವು ಇಲ್ಲಿ ಇದ್ದೇವೆ. ನಾನು ಕೂಡ ಒಬ್ಬ ಮಂತ್ರಿಯಾಗಿದ್ದವನು. ಏನು ಬೆಲೆ ಕಟ್ಟಿ ಖರೀದಿಸಲು ಹೊರಟ್ಟಿದ್ದೀರಾ? ಇವತ್ತು ಯಾರು ಯಾರು ಪಕ್ಷ ಬಿಟ್ಟು ಹೋಗಿದ್ದಾರೆ. ಎಷ್ಟೆಷ್ಟು ಹಣ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಕೂಡಬೇಕಾದರೆ ನಾನು ಹೇಳುತ್ತೇನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ ಯಾಕೆ ಬೇಕು ಸರ್ಕಾರ ನಿಮಗೆ? ಅರ್ಥ ಮಾಡಿಕೊಳ್ಳಿ, ಎಷ್ಟು ದಿನ ಇರಬಹುದು ನಾವು? ಒಂದು ದಿನ ಎಲ್ಲರೂ ಸಾಯುತ್ತೇವೆ. ಈ ಸ್ಥಿತಿಗೆ ಯಾಕೆ ಮಹತ್ಮಾಗಾಂಧಿ ಅವರು ಪ್ರಜಾಪ್ರಭುತ್ವ ಕೊಡಿಸಬೇಕಿತ್ತು ಈ ದೇಶಕ್ಕೆ? ನಾವು ಅದರಲ್ಲಿ ಬದುಕಬೇಕಾಗಿತ್ತಾ? ಇಂತಹ ಬೆಳವಣಿಗೆಗಳು ಮನಸ್ಸಿಗೆ ನೋವಾಗುತ್ತದೆ. ಅವರು ನನಗೆ ಆಫರ್ ಮಾಡಿದ್ದು ನಿಜ. ಅವರೇನಾದರು ಇಲ್ಲ ಎನ್ನಲಿ, ಆಗ ನಾನು ಅವರಿಗೆ ಉತ್ತರ ನೀಡುತ್ತೇನೆ ಎಂದು ಬಿಜೆಪಿಗೆ ಪ್ರಶ್ನೆಹಾಕಿದರು.