ಕರಾವಳಿಯಲ್ಲಿ ದ್ವೇಷದ ರಾಜಕಾರಣ ಬಿಜೆಪಿ ಸಹಿಸಲ್ಲ: ವಿಜಯೇಂದ್ರ

Public TV
3 Min Read
BY Vijayendra

– ಹೇಮಾವತಿ ನದಿ ನೀರಿನ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ

ಬೆಂಗಳೂರು: ಸರ್ಕಾರದ ನಡವಳಿಕೆಯಿಂದ ದಕ್ಷಿಣ ಕನ್ನಡ (Dakshina Kannada) – ಕರಾವಳಿ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗುತ್ತಿದೆ. ಇದನ್ನು ತಿದ್ದಿಕೊಳ್ಳದೆ ಪೊಲೀಸ್ ಮೂಲಕ ಗೂಂಡಾಗಿರಿ ಮಾಡಿದ್ದೇ ಆದರೆ, ಬಿಜೆಪಿ ಕೈಕಟ್ಟಿಕೊಂಡು ಕೂರುವುದಿಲ್ಲ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ಎಚ್ಚರಿಸಿದ್ದಾರೆ.

ನಗರದಲ್ಲಿ (Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಿಷಯವಾಗಿ ಸೋಮವಾರ ರಾತ್ರಿ ರಾಷ್ಟ್ರೀಯ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ಇವತ್ತು ನಮ್ಮ ಸಂಸದರು, ಶಾಸಕರು ಪೊಲೀಸ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವರ ಗಡೀಪಾರು ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ ಮಹಾರಾಜರು ಹಿಂದೆ ನಮ್ಮ ದೇಶವನ್ನು ಆಳಿದ್ದರು. ಆಗ ಪಾಳೇಗಾರರು ಇದ್ದ ಬಗ್ಗೆ ನಾವು ಕೇಳಿದ್ದೇವೆ. ಆ ಪಾಳೇಗಾರಿಕೆಯನ್ನು ಹಂಗಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಿದೆ. ಪ್ರಜಾಪ್ರಭುತ್ವವನ್ನು ಹಂಗಿಸುವಂತೆ ಸಿದ್ದರಾಮಯ್ಯರ ನೇತೃತ್ವದ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

BY Vijayendra Suhas Shetty

ಕಳೆದ ಕೆಲವು ತಿಂಗಳಿನಿಂದ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದ ವರ್ತನೆಯನ್ನು ತಾವು ಗಮನಿಸಿ. ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲವೆಂದು ಜನಾಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಮತ್ತೊಂದು ಕಡೆ ಸರ್ಕಾರದ ಹುಳುಕು ಮುಚ್ಚಿ ಹಾಕಿಕೊಳ್ಳಲು ಇಂಥ ಘಟನೆಗಳು ನಡೆಯುತ್ತಿವೆ. ಸರ್ಕಾರ ಕೂಡ ಹಿಂದೂ ಕಾರ್ಯಕರ್ತರಿಗೆ ಅಪಮಾನ ಮಾಡಲು ಕುತಂತ್ರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಹಾಸ್ ಹತ್ಯೆ ನಡೆದಾಗ ಗೃಹ ಸಚಿವರು ಸುಹಾಸ್ ಮನೆಗೆ ಹೋಗದಂತೆ ಕೆಲವು ದುಷ್ಟ ಶಕ್ತಿಗಳು ಅವರನ್ನು ತಡೆದಿದ್ದವು. ಸುಹಾಸ್ ಶೆಟ್ಟಿ ಹತ್ಯೆ ಆದಾಗ ಮಹಿಳೆಯರೂ ಅದರಲ್ಲಿ ಭಾಗಿಯಾಗಿದ್ದರು. ಇದು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. 3-4 ಜನ ಮಹಿಳೆಯರು ರಸ್ತೆಯಲ್ಲಿ ನಿಂತು ಕೊಲೆಗಡುಕರು, ದೇಶದ್ರೋಹಿಗಳನ್ನು ಕಾರಿನಲ್ಲಿ ಕೂರಿಸಿ, ಪರಾರಿ ಆಗಲು ಸಹಕರಿಸಿದ್ದರು. ಅದರ ಕುರಿತು ಏನಾಗಿದೆ? ಅವರನ್ನು ಬಂಧಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ. ಆದರೆ ಪೊಲೀಸರು ಕಾನೂನು- ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂಬ ನಂಬಿಕೆ ಬರುತ್ತಿಲ್ಲ. ಇದರ ನಡುವೆ ಸಂಘ ಪರಿವಾರದ ಹಿರಿಯರ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಹಿಂದೂ ಮುಖಂಡರ ವಿರುದ್ಧ ಎಫ್‍ಐಆರ್ ದಾಖಲಿಸಿ, ಕಾರ್ಯಕರ್ತರನ್ನು ಬೆದರಿಸುವ ಕುತಂತ್ರ ನಡೆಯುತ್ತಿದೆ. ಮಧ್ಯರಾತ್ರಿ ಕಾರ್ಯಕರ್ತರ ಮನೆಯ ಬಾಗಿಲು ತಟ್ಟಿ, ಅವರನ್ನು ವಿಚಾರಿಸುತ್ತಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವಾ? ಎಲ್ಲಿದ್ದೇವೆ ನಾವು ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ರೈತರ ಹಕ್ಕನ್ನು ಮೊಟಕುಗೊಳಿಸುವ ಕಾರ್ಯ
ರೈತರ ಹಕ್ಕನ್ನು ಮೊಟಕುಗೊಳಿಸುವ ಕೆಲಸ ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಹೇಮಾವತಿ ನದಿ ನೀರಿನ ವಿಚಾರದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ. ಪೊಲೀಸರ ಮೂಲಕ ಗೂಂಡಾಗಿರಿ ಮಾಡಿ ಹೋರಾಟ ಹತ್ತಿಕ್ಕುವ ಕಾರ್ಯ ನಡೆಸುತ್ತಿದೆ. ಯಾರೋ ಒಬ್ಬರೋ ಇಬ್ಬರೋ ಕಲ್ಲು ಹೊಡೆದಿರಬಹುದು; ಅದು ಸರಿ ಎನ್ನುವುದಿಲ್ಲ. ಪೊಲೀಸರು ನಮ್ಮ ರಾಜ್ಯದ ಆಸ್ತಿ. ಆದರೆ, ಯಾರೋ ಒಬ್ಬರೋ ಇಬ್ಬರೋ ಕಲ್ಲು ಹೊಡೆದರೆಂದು ನಮ್ಮ ಕಾರ್ಯಕರ್ತರನ್ನು ಹಾಗೂ ರೈತ ಮುಖಂಡರನ್ನು ಟಾರ್ಗೆಟ್ ಮಾಡಿ, ಅವರನ್ನು ಒಳಗೆ ಹಾಕುವ ಕುತಂತ್ರ ನಡೆಯುತ್ತಿದೆ. ಇದರಿಂದ ಹೇಮಾವತಿ ನದಿ ನೀರಿನ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಾನು, ನಮ್ಮ ಪಕ್ಷದ ಮುಖಂಡರು ಸ್ಥಳಕ್ಕೆ ಭೇಟಿ ಕೊಡಲಿದ್ದೇವೆ. ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ; ಅಭಿವೃದ್ಧಿಗೆ ಹಣ ಕೊಡುವುದಕ್ಕೆ ಸಾಧ್ಯ ಆಗುತ್ತಿಲ್ಲ. ಕಾನೂನು- ಸುವ್ಯವಸ್ಥೆ ಹಾಳಾಗಲು ರಾಜ್ಯ ಸರ್ಕಾರದ ಷಡ್ಯಂತ್ರವೇ ಕಾರಣ. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಸರ್ಕಾರ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವಷ್ಟು ದೊಡ್ಡ ಮನುಷ್ಯರು ನಾವಲ್ಲ; ಆದರೆ, ಸರ್ಕಾರದ ಗೂಂಡಾ ವರ್ತನೆ, ಇವರ ಸೊಕ್ಕನ್ನು ಮುರಿಯುವ ಶಕ್ತಿ ಬಿಜೆಪಿಗೆ ಇದೆ. ನಮ್ಮ ಕಾರ್ಯಕರ್ತರಿಗೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Share This Article