ಕಲಬುರಗಿ: ರಾಜ್ಯದ ಬಿಜೆಪಿ ಸಂಸದರು ಕೇವಲ ಪೇಪರ್ ಹುಲಿಗಳು ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಚಿಕ್ಕಮಗಳೂರು ಪ್ರವಾಹ ಸಂತ್ರಸ್ತ ರೈತ ಚಂದ್ರೇಗೌಡ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ತಮ್ಮ ಟ್ವಿಟ್ಟರಿನಲ್ಲಿ, “ಪ್ರವಾಹದಿಂದ ತತ್ತರಿಸಿರುವ ಕರ್ನಾಟಕ ರೈತರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯದ ಸಂಸದರು ವಿಫರಾಗಿದ್ದಾರೆ. ರಾಜ್ಯದ ಹಿತಾಸಕ್ತಿ ಪರ ಬ್ಯಾಟ್ ಬೀಸದ ಬಿಜೆಪಿ ಸಂಸದರು ಕೇವಲ ಪೇಪರ್ ಹುಲಿಗಳು. ಪ್ರಧಾನಿ ಮೋದಿ ಬಳಿ ರಾಜ್ಯಕ್ಕೆ ಪರಿಹಾರ ಕೇಳಲು ಬಿಜೆಪಿ ಸಂಸದರು ಹೆದರುತ್ತಿರುವುದೇಕೆ?. ಇನ್ನೂ ಎಷ್ಟು ಜನರು ಸಾಯಬೇಕು?” ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಸ್.ಕೆ ಮೇಗಲ್ ಗ್ರಾಮದಲ್ಲಿ ವಿಷ ಸೇವಿಸಿ ಚಂದ್ರೇಗೌಡ(55) ಸಾವಿಗೆ ಶರಣಾಗಿದ್ದರು. ಮಲೆನಾಡ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಚಂದ್ರೆ ಗೌಡರ ಒಂದು ಎಕ್ರೆ ಗದ್ದೆ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದರು. ಮಳೆಯಿಂದ ಹಾನಿಯಾಗಿದ್ದ ಗದ್ದೆ-ತೋಟವನ್ನು ಸರಿ ಮಾಡಲು ರೈತ ಕೈ ಸಾಲ ಕೂಡ ಮಾಡಿಕೊಂಡಿದ್ದರು.
Advertisement
Advertisement
ಇತ್ತ ಸರ್ಕಾರ ಇಂದು ನೆರೆ ಪರಿಹಾರ ಕೊಡುತ್ತೆ ನಾಳೆ ಪರಿಹಾರ ನೀಡುತ್ತೆ ಎಂದು ಕಾದು ಕುಳಿತಿದ್ದ ಚಂದ್ರೇಗೌಡರು, ಸರ್ಕಾರ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಸಾಕಷ್ಟು ಬೇಸತ್ತು ಹೋಗಿದ್ದರು. ಅತ್ತ ಬೆಳೆ ಹಾನಿಯಾಗಿ ನಷ್ಟವಾಗಿ, ಇತ್ತ ಸಾಲ ಕಟ್ಟಲು ಹಣವಿಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಸಾಲಕ್ಕೆ ಹೆದರಿ, ಪರಿಹಾರ ಹಣ ಬರದಿದ್ದಕ್ಕೆ ನೊಂದು ಚಂದ್ರೆ ಗೌಡರು ಆತ್ಮಹತ್ಯೆಗೆ ಶರಣಾಗಿದ್ದಾರೆ.