ಲಕ್ನೋ: ಉತ್ತರ ಪ್ರದೇಶದ ದೌರಹಾರ ಲೋಕಸಭಾ ಕ್ಷೇತ್ರದ ಸಂಸದೆ ರೇಖಾ ವರ್ಮಾ, ಕರ್ತವ್ಯನಿರತ ಪೊಲೀಸ್ ಪೇದೆಯ ಕೆನ್ನೆಗೆ ಬಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸ್ ಪೇದೆ ಸಂಸದೆ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂಸದೆಯಾಗಿ ಆಯ್ಕೆಯಾಗಿರುವ ರೇಖಾ ವರ್ಮಾರಿಗೆ ಭಾನುವಾರ ಮೊಹಮ್ಮದಿ ಪಟ್ಟಣದಲ್ಲಿ ಸನ್ಮಾನ ಸಮಾರಂಭವಿತ್ತು. ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ರಾತ್ರಿ ಸುಮಾರು 11 ಗಂಟೆಗೆ ಸಂಸದೆ ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೇದೆ ಶ್ಯಾಮ್ ಸಿಂಗ್ ಆರೋಪಿಸಿದ್ದಾರೆ.
Advertisement
Advertisement
ಪೇದೆಯ ಆರೋಪವೇನು?
ಲಖೀಮಪುರದ ಮೊಹಮ್ಮದಿ ಠಾಣೆಯ ಪೇದೆಯಾಗಿರುವ ಶ್ಯಾಮ್ ಸಿಂಗ್ ಪಟ್ಟಣಕ್ಕೆ ಆಗಮಿಸಿದ್ದ ಸಂಸದೆಗೆ ಭದ್ರತಾ ಸಿಬ್ಬಂದಿಯಾಗಿದ್ದರು. ಸಂಜೆ ಕಾರ್ಯಕ್ರಮ ಮುಗಿಸಿ ಸಂಸದೆಯನ್ನು ತಮ್ಮ ಠಾಣಾ ವ್ಯಾಪ್ತಿಯ ಗಡಿ ಪಾರು ಮಾಡಿ ವಂದನೆ ಸಲ್ಲಿಸಿ ಹಿಂದಿರುಗಿದ್ದರು. ಕೆಲ ಸಮಯದ ಬಳಿಕ ಫೋನ್ ಕರೆ ಮಾಡಿದ ಸಂಸದೆ ಹಿಂದಿರುಗಿ ಬರುವಂತೆ ಸೂಚಿಸಿದರು. ರೇಖಾ ವರ್ಮಾರ ಆದೇಶದಂತೆ ಹೋದಾಗ ನನ್ನನ್ನು ಕರೆದು ಕಪಾಳಕ್ಕೆ ಬಾರಿಸಿ, ಸುಧಾರಣೆ ಆಗು ಇಲ್ಲವಾದಲ್ಲಿ ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಶ್ಯಾಮ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದಾರೆ.
Advertisement
Advertisement
ದೂರಿನನ್ವಯ ಪೊಲೀಸರು ಸಂಸದೆ ರೇಖಾ ವರ್ಮಾರ ವಿರುದ್ಧ ಐಪಿಸಿ ಸೆಕ್ಷನ್ 332 (ಉದ್ದೇಶಪೂರ್ವಕವಾಗಿ ಸರ್ಕಾರಿ ನೌಕರನ ಮೇಲೆ ಹಲ್ಲೆ), 353 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ), 504 (ಉದ್ದೇಶಪೂರ್ವಕವಾಗಿ ಅವಮಾನಿಸೋದು) ಮತ್ತು 506 (ಜೀವ ಬೆದರಿಕೆ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಹಲ್ಲೆಯ ಸಮಯದಲ್ಲಿ ಸರ್ಕಾರಿ ವಾಹನದಲ್ಲಿ ಅರುಣ್ ಕುಮಾರ್, ದರೇಗಾ ಗೌರವ್ ಸಿಂಗ್, ಪೇದೆಗಳಾದ ಪಂಕಜ್ ರಜಪೂತ್ ಮತ್ತು ವಿವೇಕ್ ರಾವತ್ ಇದ್ದರು ಎಂದು ಶ್ಯಾಮ್ ಸಿಂಗ್ ತಿಳಿಸಿದ್ದಾರೆ. ಈ ಕುರಿತು ಸಂಸದೆ ಇದೂವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.