– ಸಚಿವರ ಕಚ್ಚಾಟದಿಂದಲೇ ಸಿಎಂ ರೆಸಾರ್ಟಿಗೆ ಹೋಗಿದ್ದಾರೆ
ಯಾದಗಿರಿ: ಸಚಿವ ಜಮೀರ್ ಅಹ್ಮದ್ ಅವರ ತಲೆಕೆಟ್ಟಿದೆ. ಹೀಗಾಗಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಂಚೋಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ತಲೆ ಕಡಿದುಕೊಳ್ಳುತ್ತೇನೆ ಅಂತ ಈ ಹಿಂದೆ ಸಚಿವ ಜಮೀರ್ ಅಹ್ಮದ್ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರ ಸರ್ಕಾರದಲ್ಲಿಯೇ ಸಚಿವರಾಗಿದ್ದಾರೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಮನೆ ಕಾಯುತ್ತೇನೆ ಎನ್ನುತ್ತಿದ್ದಾರೆ. ಅವರ ತಲೆ ಆಗಾಗ ಕೆಡುತ್ತಿರುತ್ತದೆ. ಸಚಿವರ ಮಾತಿಗೆ ಬೆಲೆ ಇಲ್ಲ. ಜಮೀರ್ ಅಹ್ಮದ್ ಅವರು ಒಮ್ಮೆ ತಲೆ ಬೋಳಿಸಿಕೊಳ್ಳುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ತಲೆ ಕಡಿದು ಟೇಬಲ್ ಮೇಲೆ ಇಡುತ್ತೇನೆ ಅಂತ ಹೇಳಿದ್ದರು ಎಂದು ತಿರುಗೇಟು ನೀಡಿದರು.
Advertisement
Advertisement
ಮೈತ್ರಿಯ ಆಂತರಿಕ ಜಗಳ, ಕಚ್ಚಾಟದಿಂದಲೇ ಸಿಎಂ ಕುಮಾರಸ್ವಾಮಿ ಅವರು ರೆಸಾರ್ಟಿಗೆ ಹೋಗಿದ್ದಾರೆ. ಅವರ ಪಾಪಕ್ಕೆ ಜನರು ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
Advertisement
ಕಳೆದ ಒಂದು ವರ್ಷದಿಂದ ಯಾವ ಸಚಿವರು ಇತ್ತ ಕಡೆ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿ ಐತಿಹಾಸಿಕ ವಿಧಾನಸೌಧ ಬಿಟ್ಟು ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ವೇದಿಕೆಯಲ್ಲಿ ಯಾರು, ಏನು ಮಾತನಾಡುತ್ತಾರೆಂದು ಸಿಎಂಗೆ ತಿಳಿಸಲು ಪೊಲೀಸ್ ಮತ್ತು ಗುಪ್ತಚರ ಇಲಾಖೆಯವರು ಇಲ್ಲಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ರೆಸಾರ್ಟಿನಲ್ಲಿ ಮಲಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದರು.
Advertisement
ಹಿಂದುಳಿದ ವರ್ಗಗಳ ನಾಯಕ ನಾನೇ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ತಮ್ಮ ಕುರುಬ ಸಮಾಜಕ್ಕೆ ಏನು ಮಾಡಿದ್ದಾರೆ? ಅನ್ನ ಭಾಗ್ಯ ಯೋಜನೆಗಾಗಿ ಕೇಂದ್ರ ಬಿಜೆಪಿ ಸರ್ಕಾರ ಸಹಾಯ ಮಾಡುತ್ತಿದೆ. ಇದನ್ನು ಯಾವ ಕಾಂಗ್ರೆಸ್ ನಾಯಕರೂ ಹೇಳುವುದಿಲ್ಲ. ಕಾಂಗ್ರೆಸ್ ಚೆಲಾಗಳು, ಪುಡಾರಿಗಳು ಅನ್ನಭಾಗ್ಯ ಅಕ್ಕಿಗಳನ್ನು ಪಕ್ಕದ ರಾಜ್ಯದ ಅಮ್ಮನ ಇಡ್ಲಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.