ಪ್ರತಾಪ್ ಸಿಂಹ ವಿಷಾದ – ಕ್ಷಮೆಯನ್ನು ಅಂಗೀಕರಿಸುತ್ತೇನೆ ಎಂದ ಪ್ರಕಾಶ್ ರೈ

Public TV
2 Min Read
PRAKASH RAI 1

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ತನ್ನ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರತಾಪ್ ಸಿಂಹ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕಾಶ್ ರೈ ಅವರು ಕೇವಲ 1 ರೂ. ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಸಂಬಂಧ ಟ್ವೀಟ್ ಮಾಡಿ ಸದ್ಯ ಪ್ರತಾಪ್ ಸಿಂಹ ಅವರು ವಿಷಾದ ಕೋರಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

ಟ್ವೀಟ್‍ನಲ್ಲೇನಿದೆ?
‘ಆತ್ಮೀಯ ಪ್ರಕಾಶ್ ರಾಜ್ ಅವರೇ, 2017 ಅಕ್ಟೋಬರ್ 2 ಮತ್ತು 3 ರಂದು ನಿಮ್ಮ ಹಾಗೂ ನಿಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಲೇಖನವನ್ನು ಪೋಸ್ಟ್ ಮಾಡಿದ್ದೆ. ಆದರೆ ಈ ಪೋಸ್ಟ್ ಗಳು ಅನಗತ್ಯ ಹಾಗೂ ನೋಯಿಸುವ ಅಂಶಗಳನ್ನು ಹೊಂದಿತ್ತು ಎಂಬುವುದನ್ನು ಅರ್ಥೈಸಿಕೊಂಡಿದ್ದೇನೆ. ಆದ್ದರಿಂದ ಟ್ವಿಟ್ಟರ್ ಹಾಗೂ ಫೇಸ್‍ಬುಕ್ ಪೋಸ್ಟ್‍ಗೆ ನಾನು ವಿಷಾದಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರತಾಪ ಸಿಂಹ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ಅವರು, ಧನ್ಯವಾದ, ನಾನು ನಿಮ್ಮ ಕ್ಷಮೆಯನ್ನು ಅಂಗೀಕರಿಸುತ್ತೇನೆ. ನಮ್ಮ ನಡುವೆ ಹಲವು ವಿಚಾರಗಳಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವುದು ತಪ್ಪು. ಇಬ್ಬರು ತಮ್ಮದೇ ಕ್ಷೇತ್ರದಲ್ಲಿ ಉತ್ತಮ ಮಟ್ಟದಲ್ಲಿ ಇದ್ದೇವೆ. ಹೀಗಾಗಿ ನಾವು ಮಾದರಿಯಾಗಿ ಇರುವುದು ನಮ್ಮ ಕರ್ತವ್ಯವಾಗಿದೆ. ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ.

ಪ್ರತಾಪ್ ಸಿಂಹ ಟ್ವೀಟ್ ಏನಿತ್ತು?
ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ? ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್‍ಲೈನ್ ಈ ಸುದ್ದಿಯಲ್ಲಿತ್ತು.

ನ್ಯಾಯಮೂರ್ತಿಗಳ ಕಳವಳ: ಇಂದು ಶಾಸಕರು ಸಂಸದರ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾ. ರಾಮಚಂದ್ರ ಡಿ.ಹುದ್ದಾರ ಅವರು ಉತ್ತರ ಕರ್ನಾಟಕದ ನೆರೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಬ್ಬರು ಸೆಲೆಬ್ರೆಟಿಗಳಾಗಿದ್ದು, ಸಮಾಜಕ್ಕೆ ಮಾದರಿಯಾಗಿರಬೇಕು. ಆದರೆ ರಾಜ್ಯದಲ್ಲಿ ಏನಾಗುತ್ತಿದೆ ಎಂದು ನಿಮಗೆ ಗೊತ್ತಿದ್ಯಾ? ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಹಲವು ಜಿಲ್ಲೆಗಳಲ್ಲಿ ಜನರಿಗೆ ತಿನ್ನಲು ಊಟ ಇಲ್ಲದ ಸ್ಥಿತಿ ಇದೆ. ಮಾಧ್ಯಮಗಳಲ್ಲಿ ದೃಶ್ಯಗಳನ್ನು ನೋಡಿದರೆ ಕಣ್ಣೀರು ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳ ಕಡೆ ಗಮನಹರಿಸಿ ಎಂದು ಪ್ರತಾಪ್ ಸಿಂಹ ಅವರಿಗೆ ಸಲಹೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *