– ಇ-ಮೇಲ್ ಅಭಿಯಾನದ ಹಿಂದೆ ಪಾಕ್-ಚೀನಾ ಷಡ್ಯಂತ್ರದ ಅನುಮಾನ ವ್ಯಕ್ತಪಡಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ
ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯು ಸುಮಾರು 1.25 ಕೋಟಿ ಪ್ರತಿಕ್ರಿಯೆಯನ್ನು ಪಡೆಯುತ್ತಿರುವ ಬಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಚೀನಾದ ಪಾತ್ರವಿದೆ ಇರಬಹುದು. ಈ ಪ್ರತಿಕ್ರಿಯೆಗಳ ಮೂಲದ ಬಗ್ಗೆ ತನಿಖೆ ನಡೆಸಬೇಕೇಂದು ಒತ್ತಾಯಿಸಿದ್ದಾರೆ.
Advertisement
ಈ ಕುರಿತು ನಿಶಿಕಾಂತ್ ದುಬೆ, ವಕ್ಫ್ ಮಸೂದೆ ತನಿಖಾ ಸಮಿತಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ಮಸೂದೆ ವಿರೋಧಿಸಿ ಬರುತ್ತಿರುವ ಪ್ರತಿಕ್ರಿಯೆಗಳ ಹಿಂದೆ ತೀವ್ರಗಾಮಿ ಸಂಘಟನೆಗಳು, ಝಾಕಿರ್ ನಾಯ್ಕ್‌ನಂತಹ ವ್ಯಕ್ತಿಗಳ ಕೈವಾಡ ಇರಬಹುದು. ಐಎಸ್‌ಐ ಮತ್ತು ಚೀನಾದಂತಹ ವಿದೇಶಿ ಶಕ್ತಿಗಳ ಸಂಭಾವ್ಯ ಪಾತ್ರವನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
ನಿಶಿಕಾಂತ್ ದುಬೆ ಸಂಸದೀಯ ಸಮಿತಿಯ ಸದಸ್ಯರೂ ಆಗಿದ್ದು, ಈ ಪ್ರತಿಕ್ರಿಯೆ ಸಲ್ಲಿಕೆಗಳ ಭೌಗೋಳಿಕ ಮೂಲದ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಭಾರತವೊಂದರಿಂದಲೇ ಇಷ್ಟು ದೊಡ್ಡ ಪ್ರಮಾಣದ ಪ್ರತಿಕ್ರಿಯೆ ಪಡೆಯುವುದು ಅಸಾಧ್ಯ. ಭಾರತವು ಪ್ರಬಲ ಸಂಸದೀಯ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದ್ದು, ವಿದೇಶಿ ಹಸ್ತಕ್ಷೇಪದ ಮೂಲಕ ಅದರ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನವು ರಾಷ್ಟ್ರೀಯ ಸಾರ್ವಭೌಮತೆಗೆ ನೇರ ಬೆದರಿಕೆಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
Advertisement
ವಕ್ಫ್ ತಿದ್ದುಪಡಿ ಮಸೂದೆಯನ್ನು ಮುಸ್ಲಿಂ ಗುಂಪುಗಳು ತೀವ್ರವಾಗಿ ವಿರೋಧಿಸುತ್ತಿವೆ. ವಕ್ಫ್ ತಿದ್ದುಪಡಿ ವಿಧೇಯಕದ ಮೂಲಕ ಅವರ ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಯತ್ನ ನಡೆಯುತ್ತಿದೆ ಎನ್ನುತ್ತಾರೆ. ವಿರೋಧ ಪಕ್ಷಗಳು ಕೂಡ ಈ ಮಸೂದೆಯನ್ನು ವಿರೋಧಿಸಿದ್ದವು, ನಂತರ ಸರ್ಕಾರವು ವಕ್ಫ್ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ನಿರ್ಧರಿಸಿತು. ಜಂಟಿ ಸಂಸದೀಯ ಸಮಿತಿಯು ವಕ್ಫ್ ತಿದ್ದುಪಡಿ ಮಸೂದೆಗೆ ಒಮ್ಮತ ಮೂಡಿಸಲು ಜನರ ಪ್ರತಿಕ್ರಿಯೆಯನ್ನು ಕೋರಿತ್ತು ಮತ್ತು ಅದಕ್ಕಾಗಿ ಜಾಹೀರಾತು ನೀಡಿತ್ತು. ಸಮಿತಿಯು ಕೋಟಿಗಟ್ಟಲೆ ಶಿಫಾರಸುಗಳನ್ನು ಸ್ವೀಕರಿಸುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇತ್ತೀಚೆಗೆ ಹೇಳಿದ್ದರು.