ಹೆಚ್‌ಎನ್ ವ್ಯಾಲಿ ನೀರನ್ನ ಸಂಪುಟ ಸದಸ್ಯರಿಗೆ ಕುಡಿಸಿ ಶುದ್ಧತೆ ಸಾಬೀತುಪಡಿಸಲಿ: ಸಚಿವ ಸುಧಾಕರ್‌ಗೆ ಸಂಸದ ಸುಧಾಕರ್‌ ಸವಾಲ್‌

Public TV
1 Min Read
K SUDHAKAR

– ಕೆಸಿ ವ್ಯಾಲಿ ಮತ್ತು ಹೆಚ್ಎ‌ನ್‌ ವ್ಯಾಲಿ 3ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ ಎಂಬ ಕಾಂಗ್ರೆಸ್‌ ಧೋರಣೆಗೆ ಖಂಡನೆ

ಚಿಕ್ಕಬಳ್ಳಾಪುರ: ಕೆ.ಸಿ.ವ್ಯಾಲಿ ಮತ್ತು ಹೆಚ್‌.ಎನ್‌ ವ್ಯಾಲಿ ಯೋಜನೆಗಳಡಿ (HN Valley Project) 3ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ ಎಂಬ ಕಾಂಗ್ರೆಸ್‌ ಸರ್ಕಾರದ ಧೋರಣೆಯನ್ನು ಸಂಸದ ಡಾ.ಕೆ ಸುಧಾಕರ್‌ (K Sudhakar) ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರವು (Congress Government) ಜನರು ಸುರಕ್ಷಿತವಲ್ಲದ ನೀರನ್ನ ಕುಡಿಯಬೇಕೆಂದು ಬಯಸುತ್ತಿದೆಯಾ? ಸಾರ್ವಜನಿಕ ಆರೋಗ್ಯ ಸುರಕ್ಷತೆ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲವಾ? ಕೆ.ಸಿ ವ್ಯಾಲಿ (KC Valley Project) ಮತ್ತು ಹೆಚ್.ಎನ್ ವ್ಯಾಲಿ ಯೋಜನೆ ಕುಡಿತು ನೀಡಿದ ಹೇಳಿಕೆಗಳು ಕಳವಳ ಕಾರಿ ಮತ್ತು ಖಂಡನೀಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರೇ, 3ನೇ ಹಂತದ ಶುದ್ಧೀಕರಣ ಇಲ್ಲದೇ ಈ ನೀರನ್ನ ಕುಡಿಯಲು ಬಳಸಬಹುದು ಎಂದು ಹೇಳಿದ್ದಾರೆ. ಈ ನೀರನ್ನು ಮೊದಲು ಸಚಿವರೇ ಕುಡಿದು ಹಾಗೂ ತಮ್ಮ ಮನೆಗಳಲ್ಲಿ ಉಪಯೋಗಿಸಿ ತೋರಿಸಲಿ. ಹಾಗೆಯೇ ಕಾಂಗ್ರೆಸ್‌ ಶಾಸಕರಿಗೆ ಮತ್ತು ಸಂಪುಟ ಸಹೋದ್ಯೋಗಿಗಳಿಗೆ ಕುಡಿಯಲು ಕೊಡಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ದಿವಾಳಿ ಆಗಿದೆ ಅಥವಾ 3ನೇ ಹಂತದ ಶುದ್ಧೀಕರಣ ಮಾಡಲು ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಲಿ. ಅದು ಬಿಟ್ಟು 3ನೇ ಹಂತದ ಶುದ್ಧೀಕರಣವೇ ಅಗತ್ಯವಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವುದು ಯಾವ ಸೀಮೆ ನ್ಯಾಯ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್‌ನ ದಿವಾಳಿ ಸರ್ಕಾರದ ಪಾಪಕ್ಕೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜನತೆ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಕಾ? ತಮ್ಮ ಪಾಪರ್ ಸರ್ಕಾರದ ಅಯೋಗ್ಯತೆಗೆ ಅಮಾಯಕ ಜನರು ಬಲಿಯಾಗಬೇಕಾ? ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇದ್ದರೆ 3ನೇ ಹಂತದ ಶುದ್ಧೀಕರಣ ಮಾಡಿಸಲಿ. ಇಲ್ಲವಾದ್ರೆ 2028 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 3ನೇ ಹಂತದ ಶುದ್ಧೀಕರಣ ಯೋಜನೆ ಜಾರಿ ಮಾಡಲಿದೆ ಎಂದು ಅವರು ಹೇಳಿದ್ದಾರೆ.

Share This Article