ಕಾರವಾರ: ಕಾಂಗ್ರೆಸ್ ಶಾಸಕನೊಂದಿಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಗೌಪ್ಯ ಸಭೆ ನಡೆಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹಲವು ತಿಂಗಳಿನಿಂದ ಪಕ್ಷ ಹಾಗೂ ಕ್ಷೇತ್ರದ ಕಾರ್ಯಚಟುವಟಿಕೆಯಿಂದ ದೂರ ಉಳಿದಿದ್ದ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಭೆಗೆ ಆಗಮಿಸಿದ್ದರು.
ಈ ವೇಳೆ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ರನ್ನು (Satish Sail) ಅಪ್ಪಿಕೊಂಡು ಗೆಲುವಿಗಾಗಿ ಶುಭಹಾರೈಸಿ ಬೆನ್ನು ತಟ್ಟಿದರು. ನಂತರ ತಮ್ಮದೇ ಕಾರಿನಲ್ಲಿ ಕಾರವಾರದ ಪ್ರವಾಸಿ ಮಂದಿರಕ್ಕೆ ಕರೆದೊಯ್ದು ಅವರೊಂದಿಗೆ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗಿಲ್ಲ ಕೇಂದ್ರದ ಅಕ್ಕಿ – ಆಶಾಭಾವನೆಯಿಂದ ಬಂದ ನಮಗೆ ಎರಡನೇ ಬಾರಿ ನಿರಾಸೆ: ಮುನಿಯಪ್ಪ
ಈ ಹಿಂದೆ ಬಿಜೆಪಿ ಸೇರುವಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಆಹ್ವಾನವನ್ನು ಹೆಗಡೆ ನೀಡಿದ್ದರು. ಆದರೆ ಪಕ್ಷದ ವರಿಷ್ಠರ ಕಾರಣದಿಂದ ಸೈಲ್ ಬಿಜೆಪಿಗೆ ಸೇರದಂತಾಗಿತ್ತು. ಇನ್ನು ಸೈಲ್ ಕೂಡ ಚುನಾವಣಾ ಸಂದರ್ಭದಲ್ಲಿ ಪಕ್ಷದ ಯಾವ ನಾಯಕರನ್ನು ಕರೆಸದೇ ಹಾಗೂ ಪಕ್ಷದ ಯಾವುದೇ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸದೇ ಪಕ್ಷದಲ್ಲೇ ಅಂತರ ಕಾಯ್ದುಕೊಂಡಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರವಾರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಾರದೇ ತಟಸ್ಥವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಸೈಲ್ 2000 ಮತಗಳ ಅಂತರದಲ್ಲಿ ಗೆಲ್ಲುವಂತೆ ಮಾಡಿದ್ದರು. ಇದೀಗ ಸೈಲ್ ಭೇಟಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿದ ಒತ್ತಡ; ಸಾರ್ವಜನಿಕರ ಎದುರೇ ಆಧಾರ್ ಕೇಂದ್ರದ ಸಿಬ್ಬಂದಿ ಕಣ್ಣೀರು