– ಸ್ವಗ್ರಾಮದವರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯೆ
ಚಿಕ್ಕಬಳ್ಳಾಪುರ: ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಬದಲಾಗಿ ನನ್ನ ಹಾಗೂ ನಮ್ಮ ಹಿರಿಯರ ಮೇಲೆ ಕುಡಿದು ಹಲ್ಲೆ ಮಾಡಲು ಅವರೇ ಬಂದಿದ್ರು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್, ದೊಡ್ಡರಾಯಪ್ಪನಹಳ್ಳಿ ಸ್ವಗ್ರಾಮದವರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾರನ್ನೂ ಹೊಡೆದಿಲ್ಲ. ಅವರೇ ಕುಡಿದು ಬಂದು ನನ್ನ ಹೊಡೆಯೋಕೆ ಬಂದರು. ಆಗ ನಾನು ತಡೆದೆ ಅಷ್ಟೇ. ಮೇಳೆಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷನೇ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾನೆ. ಈಗ ಊರಲ್ಲಿ ಸರ್ಕಾರಿ ಶಾಲೆ ಕಟ್ಟೋಕೆ ಹೋದರೆ ಅಡ್ಡಿಪಡಿಸುತ್ತಿದ್ದಾನೆ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಈ ಸಂಬಂಧ ಮೇಳೆಕೋಟೆ ಗ್ರಾಮ ಪಂಚಾಯತಿ ಪಿಡಿಓ ರಮಿತಾ ಅವರನ್ನು ಕೇಳಿದರೆ, ಸರ್ಕಾರಿ ಶಾಲೆ ಕಟ್ಟಡ ಕಟ್ಟೋಕೆ 178-88 ಅಳತೆಯ ನಿವೇಶನವನ್ನ ಮಂಜೂರು ಮಾಡಿದ್ದೇವೆ. ಆದರೆ ಅದನ್ನು ಹೊರತುಪಡಿಸಿ ಗ್ರಾಮ ಪಂಚಾಯತಿ ಅಧ್ಯಕ್ಷರ ಮನೆಗೆ ಹೊಂದಿಕೊಂಡಂತೆ ಅಲ್ಲಿ ಅಂದಾಜು ಇನ್ನೂ 20 ಅಡಿ ಜಾಗ ಉಳಿದಿತ್ತು. ಈಗ ಎಲ್ಲಾ ಜಾಗವನ್ನ ಸೇರಿಸಿ ಶಾಲಾ ಕಟ್ಟಡ ಕಟ್ಟಲಾಗುತ್ತಿದೆ. ಈ ಬಗ್ಗೆ ನಾವು ಶಾಲಾ ಮುಖ್ಯೋಪಾಧ್ಯಾಯರಿಗೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದರು.
Advertisement
ಏನಿದು ಪ್ರಕರಣ?:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಸ್ವಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆ ಅಡಿ ಸರ್ಕಾರಿ ನೂತನ ಶಾಲಾ ಕಟ್ಟಡ ಕಟ್ಟುವುದಕ್ಕೆ ತೇಜಸ್ವಿನಿ ರಮೇಶ್ ಮುಂದಾಗಿದ್ದಾರೆ. ಶಾಲಾ ಕಟ್ಟಡಕ್ಕೆ ಗ್ರಾಮದಲ್ಲಿನ ಸರ್ಕಾರಿ ಕರಾಬು ಜಾಗ 178-88 ಅಡಿ ಅಳತೆಯ ನಿವೇಶನವನ್ನ ಗ್ರಾಮಪಂಚಾಯತಿ ವತಿಯಿಂದ ಮಂಜೂರು ಮಾಡಿಸಿಕೊಂಡಿದ್ದಾರೆ. ಶಾಲಾ ಕಟ್ಟಡ ಕಟ್ಟುವುದಕ್ಕೆ ಬಂದಿದ್ದ ಒಂದು ಕೋಟಿ ರೂ. ಅನುದಾನ ಸಹ ವಾಪಸ್ ಆಗಿದೆಯಂತೆ. ಆದರೆ ಹೇಗೋ ಕಾಮಗಾರಿ ಆರಂಭ ಮಾಡಿಸಿರುವ ತೇಜಸ್ವಿನಿ ರಮೇಶ್ ಜಾಗದಲ್ಲಿ ಶಾಲಾ ಕಟ್ಟಡದ ಕಾಮಗಾರಿ ಆರಂಭಿಸಿದ್ದಾರೆ.
Advertisement
ಶಾಲಾ ಕಟ್ಟಡ ಕಟ್ಟುವುದಕ್ಕೆ ನೀಡಿದ್ದ 178-88 ಅಡಿ ಜಾಗದ ಜೊತೆಗೆ ಹೆಚ್ಚುವರಿ ಜಾಗವನ್ನ ಆಕ್ರಮಿಸಿಕೊಳ್ಳಲಾಗಿದೆ. ಇದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ ಎಂಬವರ ಮನೆಗೆ ಹೋಗಿ ಬರುವುದಕ್ಕೆ ರಸ್ತೆಯೇ ಇಲ್ಲದಂತಾಗಿದೆ. ಹೀಗಾಗಿ ಶಾಲಾ ಕಟ್ಟಡ ಕಾಮಗಾರಿಯನ್ನ ಸ್ಥಗಿತ ಮಾಡುವಂತೆ ಗ್ರಾಮ ಪಂಚಾಯತಿ ಆಧ್ಯಕ್ಷರೇ ಸ್ವತಃ ಪಿಡಿಓಗೆ ದೂರು ನೀಡಿದ್ದಾರೆ.
ಈ ಮಧ್ಯ ಶಾಲಾ ಕಟ್ಟಡ ವಿವಾದ ತಾರಕಕ್ಕೇರಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಅವರ ಕಡೆಯವರು ಮತ್ತು ತೇಜಸ್ವನಿ ರಮೇಶ್ ಅವರ ಬೆಂಬಲಿಗರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ತೇಜಸ್ವಿನಿ ರಮೇಶ್ ಗ್ರಾಮ ಪಂಚಾಯತಿ ಅಧ್ಯಕ್ಷರ ಕಡೆಯವರ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಸದ್ಯ ಗ್ರಾಮದಲ್ಲಿ ಶಾಲಾ ಕಟ್ಟಡ ಕಟ್ಟುವ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಗ್ರಾಮಪಂಚಾಯತಿ ಆಧ್ಯಕ್ಷ ಹಾಗೂ ತೇಜಸ್ವಿನಿ ರಮೇಶ್ ನಡುವೆ ಜಟಾಪಟಿ ಮುಂದುವರಿದಿದೆ. ಹೀಗಾಗಿ ಗ್ರಾಮದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸಹ ಮೊಕ್ಕಾಂ ಹೂಡಿದ್ದಾರೆ.