BelgaumDistrictsKarnatakaLatest

ಸಿಎಜಿ ವರದಿ ನೋಡಿ ನನಗೆ ಹಾರ್ಟ್ ಅಟ್ಯಾಕ್ ಆಗಿತ್ತು: ರವಿಕುಮಾರ್ ವ್ಯಂಗ್ಯ

ಬೆಳಗಾವಿ: ಸಿಎಜಿ ವರದಿ ನೋಡಿ ನನಗೆ ಹಾರ್ಟ್ ಅಟ್ಯಾಕ್ ಆಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯ ಮಾತಿನ ಚಕಮಕಿ ಉಂಟಾಯಿತು.

ಬೆಳಗಾವಿ ಅಧಿವೇಶನದ ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‍ನಲ್ಲಿ 19% ಹಣದ ಖರ್ಚಿಗೆ ದಾಖಲೆ ಇಲ್ಲ. ಸುಮಾರು 35 ಸಾವಿರ ಕೋಟಿಗೆ ಲೆಕ್ಕ ಇಲ್ಲ. ಇದಕ್ಕೆ ಉತ್ತರ ಕೊಡುವವರು ಯಾರು? ಸಾಲದ ಮೇಲಿನ ಬಡ್ಡಿ 12 ಸಾವಿರ ಕೋಟಿ ರೂ. ಕಟ್ಟಲಾಗಿದೆ. ಇದರಲ್ಲಿ ಬಳಕೆಯಾಗದ ಹಣ ಸರ್ಕಾರವನ್ನು ವಾಪಾಸ್ ನೀಡಿಲ್ಲ. ಈ ಕುರಿತಾಗಿ ಮಾಜಿ ಸಿಎಂ ಯಾಕೆ ಮಾಹಿತಿ ನೀಡದೆ ಮುಚ್ಚಿಟ್ಟರು. ಆಡಳಿತಾತ್ಮಕ ಅನುಮೋದನೆ ಇಲ್ಲದ ಹಣವನ್ನು ಖರ್ಚು ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರವಿಕುಮಾರ್ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಐವಾನ್ ಡಿಸೋಜಾ, ಸಿಎಜಿ ವರದಿವನ್ನು ಇನ್ನೊಂದು ದಿನ ಪ್ರಸ್ತಾಪಿಸಿ ಚರ್ಚೆ ಮಾಡೋಣ ಎಂದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣವೇ ನಿರ್ಮಾಣವಾಯಿತು. ವಿಪಕ್ಷ- ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿ ಜೋರಾಯಿತು. ಸದನದಲ್ಲಿ ಮಂಡಿಸಬೇಕಾದ ಬಿಲ್ ಬಗ್ಗೆ ಮಾತಾಡಿ ಎಂದು ಕಾಂಗ್ರೆಸ್ – ಜೆಡಿಎಸ್ ಸದಸ್ಯರ ಒತ್ತಾಯಿಸಿದರೂ ಗದ್ದಲ ಮಾತ್ರ ಕಡಿಮೆಯಾಗಲಿಲ್ಲ.

ಸರ್ಕಾರದ ಹಣ ತಿಂದು ಜೈಲಿಗೆ ಹೋಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಂದು ಐವಾನ್ ಡಿಸೋಜಾ ಗುಡುಗಿದರು. ಈ ಹೇಳಿಕೆಯಿಂದಾಗಿ ಬಿಜೆಪಿ ಸದಸ್ಯರು ಐವಾನ್ ಡಿಸೋಜಾ ವಿರುದ್ದ ತಿರುಗಿ ಬಿದ್ದು, ಇಂದಿರಾ ಗಾಂಧಿ ಕೂಡ ಜೈಲಿಗೆ ಹೋಗಿದ್ರು ಎಂದು ಆರೋಪಿಸಿದರು.

ಏನಿದು ಸಿಎಜಿ ವರದಿ?:
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎನ್ನುವ ಪ್ರಧಾನ ಮಹಲೇಖಪಾಲರ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್) ವರದಿ ಆಧರಿಸಿ ಬಿಜೆಪಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದೆ. ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಶಾಸಕ ಅಶ್ವಥ್ ನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲೂಟಿ ಅವಧಿ 2016-17 ಎಂಬ ಶೀರ್ಷಿಕೆಯಡಿಯಲ್ಲಿ 36 ಪುಟಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ್ದರು.

ಕಿರುಹೊತ್ತಿಗೆಯಲ್ಲಿರುವ ಪ್ರಮುಖ ಆರೋಪಗಳೇನು?:
* 788 ಕೆರೆಗಳಿಗೆ ನೀರು ತುಂಬಲಿಲ್ಲ. ಆದರೆ 1433.41 ಕೋಟಿ ರೂ. ಬಿಡುಗಡೆಯಾಗಿದೆ
* ಶಾಸಕಾಂಗದ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ಹಣ ಬಿಡುಗಡೆ.
* ಬಡ್ಡಿ ಹಣದಲ್ಲಿ ಅಧಿಕಾರಿಗಳ ಮೋಜು
* ಯೂನಿಫಾರಂ ಖರೀದಿಯಲ್ಲಿ 1.72 ಕೋಟಿ ರೂ. ಹಗರಣ
* 115.10 ಕೋಟಿ ರೂ. ಲ್ಯಾಪ್ ಟಾಪ್ ಹಗರಣ
* ಬಳಕೆಯಾಗದ 1199.81 ಕೋಟಿ ರೂ. ಸರ್ಕಾರಕ್ಕೆ ಮರು ಪಾವತಿ ಮಾಡಿಲ್ಲ
* 254.34 ಕೋಟಿ ರೂ. ಗಳಿಗೆ ಬಳಕೆ ಪ್ರಮಾಣ ಪತ್ರ ಕೊಟ್ಟಿಲ್ಲ
* 7378.34 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡದೆ ಕಾಮಗಾರಿಗೆ ಅವಕಾಶ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button