– ಕುಡುಕರು ಗಾಂಧಿ ಕಾಂಗ್ರೆಸ್‌ಗೆ ಸದಸ್ಯರಾಗುವಂತಿರಲಿಲ್ಲ, ಈಗಿನ ಕಾಂಗ್ರೆಸ್‌ನವ್ರು ರಾತ್ರಿಯಿಡೀ ಕುಡಿದು ಬೆಳಗ್ಗೆ ಸಮಾವೇಶ ಮಾಡ್ತಾರೆ
ಬೆಂಗಳೂರು: ಕಾಂಗ್ರೆಸ್ಸಿಗರು ಇಂದಿನ ಸಮಾವೇಶಕ್ಕೆ ಬಳಸಿದ ಹಣ ಯಾವುದು? ಅದರ ಲೆಕ್ಕ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅದು ಕಾಂಗ್ರೆಸ್ಸಿನ ಖಾತೆಯಿಂದ ಖರ್ಚಾದ ಹಣವೇ? ಅಥವಾ ನೀವು ಸರ್ಕಾರದ ಬೊಕ್ಕಸದಿಂದ ಖರ್ಚು ಮಾಡಿದ್ದೀರಾ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ಸುವರ್ಣಸೌಧದ ಮುಂದೆ ಗಾಂಧಿ ಪ್ರತಿಮೆಯನ್ನು ಇವತ್ತು ಪ್ರತಿಷ್ಠಾಪನೆ ಮಾಡಿದ್ದಾರೆ. ಸರ್ಕಾರಿ ಬೊಕ್ಕಸದಿಂದ ಗಾಂಧಿ ಪ್ರತಿಮೆ ಪ್ರತಿಷ್ಠಾಪನೆಗೆ ನಮ್ಮ ವಿರೋಧವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ರವಿಕುಮಾರ್
ಇದು ಮಹಾತ್ಮ ಗಾಂಧಿಯವರ ಕಾಲದ ಕಾಂಗ್ರೆಸ್ ಪಕ್ಷ ಅಲ್ಲ. ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇವತ್ತಿನ ಗಾಂಧಿಗಳ ಕಾಂಗ್ರೆಸ್ಸಿನ ಸಿದ್ಧಾಂತಕ್ಕೂ ಅಜಗಜಾಂತರವಿದೆ. ಅವತ್ತಿನ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಮದ್ಯಪಾನ ಮಾಡುತ್ತಿದ್ದರೋ ಅವರು ಸದಸ್ಯರಾಗುವ ಹಾಗಿರಲಿಲ್ಲ. ಇವತ್ತಿನ ಕಾಂಗ್ರೆಸ್ಸಿನವರು ರಾತ್ರಿಯಿಡೀ ಕುಡಿದು ಮಲಗಿದ್ದು, ಬೆಳಗ್ಗೆ ಸಮಾವೇಶ ಮಾಡುತ್ತಾರೆ ಎಂದು ಟೀಕಿಸಿದರು.
ಎಲ್ಲರೂ ಖಾದಿಧಾರಿಗಳಾಗಿ ಇರಬೇಕು ಎಂಬುದು ಹಳೆ ಕಾಂಗ್ರೆಸ್ಸಿನ ಸಿದ್ಧಾಂತ. ಇವತ್ತು ಶೇ. 5-10 ರಷ್ಟು ಖಾದಿಧಾರಿಗಳೂ ಅಲ್ಲಿ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಮಹಾತ್ಮ ಗಾಂಧಿಯವರು ಈ ಕಾಲದಲ್ಲಿ ಇದ್ದಿದ್ದರೆ, ಈ ಕಾಂಗ್ರೆಸ್ಸಿನವರನ್ನು ಅಟ್ಟಾಡಿಸಿ, ಕಾಂಗ್ರೆಸ್ಸಿನಿಂದ ಹೊರಕ್ಕೆ ಓಡಿಸುತ್ತಿದ್ದರು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕಾ – ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಸುಡುವ ಮನೆ ಎಂದಿದ್ದ ಡಾ.ಅಂಬೇಡ್ಕರರು
ಇಂಥ ಪರಿಸ್ಥಿತಿಯಲ್ಲಿ ಇಲ್ಲಿ ಕಾಂಗ್ರೆಸ್ಸಿನ ಒಂದು ಸಮಾವೇಶ ನಡೆಯುತ್ತಿದೆ. ಇದು ಗಾಂಧಿ ತತ್ವಗಳ ವಿರೋಧಿ ಕಾಂಗ್ರೆಸ್ಸಿನ ಸಮಾವೇಶ. ಜೈ ಭೀಮ್ ಎಂದಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರು ಯಾವತ್ತಾದರೂ ಕಾಂಗ್ರೆಸ್ಸಿನವರಾಗಿದ್ದರೇ ಎಂದು ಛಲವಾದಿ ಪ್ರಶ್ನಿಸಿದರು.
ಕಾಂಗ್ರೆಸ್ ಸುಡುವ ಮನೆ ಎಂದವರು, ಕಾಂಗ್ರೆಸ್ಸಿನ ಮೊದಲ ಕ್ಯಾಬಿನೆಟ್‍ನಿಂದ ರಾಜೀನಾಮೆ ಕೊಟ್ಟು ಹೊರಕ್ಕೆ ಹೋದವರು ಬಾಬಾ ಸಾಹೇಬ ಅಂಬೇಡ್ಕರರು. ಅಂಬೇಡ್ಕರರ ತತ್ವಗಳ ವಿರೋಧಿ, ಅವರನ್ನು ಜೀವಿತಾವಧಿಯಲ್ಲಿ ಅವಮಾನಿಸಿದ್ದ, ಚುನಾವಣೆಗಳಲ್ಲಿ ಸೋಲಿಸಿದ್ದ, ಅವರು ಗೆದ್ದ ಸ್ಥಳವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ ಕಾಂಗ್ರೆಸ್ ಪಕ್ಷವು ಇವತ್ತು ವೋಟ್‌ಬ್ಯಾಂಕ್‌ಗಾಗಿ ಈ ನಾಟಕ ಮಾಡುತ್ತಿದೆ. ದಲಿತ ಸಮುದಾಯಗಳನ್ನು ಸೆಳೆಯಲು ಜೈ ಭೀಮ್ ಘೋಷಣೆ ಮಾಡಿದೆ ಎಂದು ಟೀಕಿಸಿದರು.
ಸಂವಿಧಾನಕ್ಕೆ ದ್ರೋಹ ಮಾಡಿದ್ದರೆ, ಅನ್ಯಾಯ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ. ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಬಾಬಾ ಸಾಹೇಬ ಅಂಬೇಡ್ಕರರು ಬರೆದ ಸಂವಿಧಾನವನ್ನು ತಿರುಚಿ, 1975-76 ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿ ಸಂವಿಧಾನಕ್ಕೆ ಘೋರ ಅಪರಾಧ ಮಾಡಿದ ಪಕ್ಷ ಕಾಂಗ್ರೆಸ್ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಸಿ.ಟಿ ರವಿಯನ್ನ ಊರೆಲ್ಲ ತಿರುಗಿಸಿದ್ದೇ ಸಾಧನೆ ಅಲ್ಲ – ಸಾಲು ಸಾಲು ದರೋಡೆಗೆ ಕೋಟಾ ಕಿಡಿ
ಕಳೆದ ವಾರ ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಯಾಣ ಮಾಡುತ್ತಿದ್ದ ಕಪ್ಪು ಕಾರು ಅಪಘಾತಕ್ಕೆ ಈಡಾಗಿದೆ. ಆ ಕಾರಿನಲ್ಲಿ ಯಾರ‍್ಯಾರು ಇದ್ದರು? ನೀವು ಸಚಿವರಾಗಿ ಸರ್ಕಾರಿ ಕಾರಿದ್ದರೂ, ಸೆಕ್ಯುರಿಟಿ, ಎಸ್ಕಾರ್ಟ್ ಬಿಟ್ಟು ಯಾಕೆ ಹೋಗಿದ್ದೀರಿ? ಪ್ರವಾಸ ಯೋಜನೆ (ಟಿಪಿ) ಯಾಕಿಲ್ಲ? ಎಂದು ಕೇಳಿದರು. ಅವರಿಗೆ ಆದ ಅಪಘಾತ, ನೋವಿಗೆ ವಿಷಾದ, ಬೇಸರ ವ್ಯಕ್ತಪಡಿಸಿದರು. ಆ ನೋವು, ಪೆಟ್ಟು ಬೇಗನೆ ವಾಸಿ ಆಗಲಿ ಎಂದರು.
ಸೆಕ್ಯುರಿಟಿ ಬಿಟ್ಟು ಪ್ರಯಾಣಿಸಿದ್ದೇಕೆ? ಘಟನೆ ನಡೆದಿದ್ದು ಹೇಗೆಂದು ಜನರಿಗೆ ತಿಳಿಸಿ. ಚಾಲಕ ಎಲ್ಲಿದ್ದಾರೆಂದು ತಿಳಿಸಿ. ನಾಯಿ ಅಡ್ಡ ಬಂದದ್ದು, ಹಿಂದಿನಿಂದ ಗುದ್ದಿ ಹೋದದ್ದು, ಡ್ರೈವರ್ ನಿದ್ದೆಗೆ ಜಾರಿದ್ದ- ಇವುಗಳಲ್ಲಿ ಯಾವುದು ಸತ್ಯ? ಎಸ್ಕಾರ್ಟ್ ಯಾಕೆ ಇರಲಿಲ್ಲ ಎಂದು ಕೇಳಿದರು.
ಬೆಳಗಾವಿಗೆ ಕರೆನ್ಸಿ ಲೋಡ್ ತೆಗೆದುಕೊಂಡು ಹೋಗುತ್ತಿದ್ದರೆಂದು ಜನರು ಹೇಳುತ್ತಾರೆ. ಇದು ಮನೆ ಮಾತಾಗಿದೆ. ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸುತ್ತಿದ್ದರೆನ್ನಲಾಗಿದೆ. ದೂರು ಕೊಡದೆ ಆ ಕಾರನ್ನು ಲಿಫ್ಟ್ ಮಾಡಿ ಒಯ್ದದ್ದು ಯಾಕೆ ಎಂದು ಪ್ರಶ್ನಿಸಿದರು. ಕಾರಿನಲ್ಲಿದ್ದ ವಸ್ತುಗಳ ಕುರಿತು ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.