ಚಿಕ್ಕಬಳ್ಳಾಪುರ: ಆಪರೇಷನ್ ಕಮಲದ ಸುದ್ದಿ ಬೆನ್ನಲ್ಲೇ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿದ್ದ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ಬೆಂಗಳೂರಿಗೆ ಮರಳುತ್ತಿದ್ದಾರೆ.
ಆಪರೇಷನ್ ಕಮಲಕ್ಕೆ ಪ್ಲಾನ್ ಮಾಡಿ ಹರಿಯಾಣದ ಗುರುಗ್ರಾಮದಲ್ಲಿ ಬಿಜೆಪಿ ಶಾಸಕರಿಗೆ ವಾಸ್ತವ್ಯ ಏರ್ಪಡಿಸಲಾಗಿತ್ತು ಎಂಬ ಆಡಳಿತ ದೋಸ್ತಿ ಪಕ್ಷಗಳ ಆರೋಪದ ಬೆನ್ನಲ್ಲೇ, ರೆಸಾರ್ಟ್ ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಗುರುವಾರ ಸಂಜೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಬಿಜೆಪಿಯ ಬೀಳಗಿ ಕ್ಷೇತ್ರದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಮುರಗೇಶ್ ನಿರಾಣಿ, ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಇಂದು ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಶಾಸಕರು ತೆರಳಿದರು.
ಇದರೊಂದಿಗೆ ಗುರುಗ್ರಾಮ ರೆಸಾರ್ಟ್‍ನಿಂದ ಶಾಸಕರಾದ ಮಾಧುಸ್ವಾಮಿ, ಜ್ಯೋತಿ ಗಣೇಶ್ ಸೇರಿದಂತೆ ಹಲವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ರೆಸಾರ್ಟ್ ನಲ್ಲಿದ್ದ 104 ಶಾಸಕರ ಸಂಖ್ಯೆ ಸದ್ಯ 85ಕ್ಕೆ ಇಳಿಕೆ ಆಗಿದೆ ಎಂಬ ಮಾಹಿತಿ ಲಭಿಸಿದೆ.
ಆಪರೇಷನ್ ಕಮಲ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸಿಹಿ ಸುದ್ದಿ ನೀಡುತ್ತಾರೆ ಎಂದು ಕಾದು ಕುಳಿತ್ತಿದ್ದ ಶಾಸಕರು ನಿರಾಸೆಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲು ಮುಂದಾಗಿದ್ದರು. ಈ ನಡುವೆ ಕ್ಷೇತ್ರದ ಜನರಿಗೆ ಯಾವ ಸಮಜಾಯಿಷಿ ನೀಡಬೇಕು ಎಂಬ ಬಗ್ಗೆಯೂ ತಿಳಿಯದೇ ಪರದಾಟ ನಡೆಸಿದ್ದರು ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv