– ಸಿಎಂ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದ ಬಿಜೆಪಿ ನಾಯಕು
– ಮೂರು ಬಾರಿ ಅರ್ಧ ಗಂಟೆ ವಿರಾಮ ಕೊಟ್ರು ನಿಲ್ಲಲಿಲ್ಲ ಪ್ರತಿಭಟನೆ
– ಸರ್ಕಾರ ಬುರುಡೆ ಬುರುಡೆ ಎಂದು ಹೊರ ನಡೆದ ವಿಪಕ್ಷದ ಶಾಸಕರು
ಬೆಳಗಾವಿ: ಆಡಳಿತ ಪಕ್ಷದ ವಿರುದ್ಧದ ಘೋಷಣೆ, ಪ್ರತಿಪಕ್ಷದ ಪ್ರತಿಭಟನೆಯಿಂದಾಗಿ ಮಧ್ಯಹ್ನಾದವರೆಗೂ ಕಲಾಪವೇ ನಡೆಯದ ಪ್ರಸಂಗ ಇಂದು ನಡೆಯಿತು.
ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಸಿಎಂ ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರ ಕ್ಷಮೆ ಕೇಳಬೇಕು ಎಂದು ನಿನ್ನೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಅದನ್ನು ಇಂದೂ ಕೂಡ ಮುಂದುವರಿಸಿ ಸದನದ ಬಾವಿಯಲ್ಲಿ ನಿಂತು ಧರಣಿ ಮುಂದುವರಿಸಿದ್ದಾರೆ.
Advertisement
Advertisement
ರೈತರ ಸಾಲಮನ್ನಾ ಮಾಡಲೇಬೇಕು. ಕುಮಾರಸ್ವಾಮಿ ಅವರು ಬಿ.ಎಸ್.ಯಡಿರೂರಪ್ಪ ಅವರ ಕ್ಷಮೆ ಕೇಳಲೇಬೇಕು ಎಂದು ಘೋಷನೆ ಕೂಗಿದರು. ಶಾಸಕರ ಪ್ರತಿಭಟನೆಯಿಂದಾಗಿ ವಿಧಾನಸಭಾ ಕಲಾಪ ಗೊಂದಲದ ಗೂಡಾಯಿತು. ಈ ವೇಳೆ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷದ ನಾಯಕರು ಕಿತ್ತಾಡಿಕೊಂಡ ಪ್ರಸಂಗಗಳು ಕಂಡು ಬಂದವು.
Advertisement
ಬಿಜೆಪಿ ಶಾಸಕ ಮಧುಸ್ವಾಮಿ ಮಾತನಾಡುತ್ತಿದ್ದಾಗ ಕೆಲವು ಆಡಳಿತ ಪಕ್ಷದ ಶಾಸಕರು ಮಧ್ಯ ಪ್ರವೇಶ ಮಾಡಿದರು. ಈ ವೇಳೆ ಕೋಪಗೊಂಡ ಮುಧುಸ್ವಾಮಿ, ರೀ ಬಾಯಿ ಮುಚಗೊಂಡು ಕುಳಿತುಕೊಳ್ರೀ ಎಂದು ಕಿಡಿಕಾರಿ, ಸಿಎಂ ಕ್ಷಮೆ ಕೇಳಬೇಕು, ಸಾಲಮನ್ನಾ ಕುರಿತು ಸಮರ್ಪಕ ಉತ್ತರ ಕೊಟ್ಟ ಬಳಿಕ ಸದನ ನಡೆಸುವುದಕ್ಕೆ ಸಹಕಾರ ಕೊಡುತ್ತೇವೆ ಎಂದರು.
Advertisement
ಸಿಎಂ ವಿರುದ್ಧ ಬಿಎಸ್‍ವೈ ಕಿಡಿ:
ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಆರು ತಿಂಗಳಲ್ಲಿ ನಿಮ್ಮ ಸಾಧನೆ ಏನು? ಸಾಲಮನ್ನಾ ಮಾಡಿಲ್ಲ. ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಲಿದೆ. ಸಹಕಾರ ಕ್ಷೇತ್ರ ಏನಾಗಿದೆ ಅಂತಾ ನಿಮಗೆ ಗೊತ್ತಿದೆ. ಕುಮಾರಸ್ವಾಮಿ ಅವರು ಇದುವರೆಗೂ ಒಂದು ದಿನ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಭತ್ತ ಉತ್ತಲು ಹೋದರು. ಆದರೆ ಬರ ಪ್ರದೇಶಕ್ಕೆ ಹೋಗಲಿಲ್ಲ. ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು ಬಿಟ್ಟರೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿ ಕುಟುಕಿದರು.
ತೊಗರಿ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕುಮಾರಸ್ವಾಮಿ ಅವರು ನಿನ್ನೆ ಅರ್ಧಂಬರ್ಧ ಉತ್ತರ ಕೊಟ್ಟು ಮುಗಿತು ಅಂತ ಹೇಳಿಬಿಟ್ಟರು. ಹೀಗೆ ಮಾಡಿದರೆ ಹೇಗೆ? ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಕಲಾಪದಲ್ಲಿ ಸರ್ಕಾರವು ಯಾವುದೇ ಚರ್ಚೆಯ ಕುರಿತು ಸಮರ್ಥ ರೀತಿಯಲ್ಲಿ ಉತ್ತರ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಶಾಸಕರ ಪ್ರತಿಭಟನೆಯಿಂದಾಗಿ ಅರ್ಧ ಗಂಟೆ ಸದನವನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದರು. ಬಳಿಕ ಆರಂಭವಾದ ಕಲಾಪದಲ್ಲಿಯೂ ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಘೋಷಣೆ ಜೋತಾಗಿತ್ತು. ಮಧ್ಯ ಪ್ರವೇಶ ಮಾಡಿದ ಸಚಿವ ಆರ್.ವಿ.ದೇಶಪಾಂಡೆ ಅವರು ಸದನ ನಡೆಸಲು ಅನುಮತಿ ಮಾಡಿಕೊಡುವಂತೆ ಕೈಮುಗಿದು ಮನವಿ ಮಾಡಿಕೊಂಡರು. ಇದಕ್ಕೆ ಬಿಜೆಪಿ ನಾಯಕರು ಒಪ್ಪಲಿಲ್ಲ. ಈ ವೇಳೆ ಏರು ಧ್ವನಿಯಲ್ಲಿ ಶಾಸಕರೊಬ್ಬರು, ನಿಮ್ಮ ಹಣೆಬರಹಕ್ಕಂತೂ ರೈತರ ಒಂದು ರೂಪಾಯಿ ಕೂಡ ಸಾಲಮನ್ನಾ ಮಾಡಲಿಲ್ಲ. ನಾವು ಮಾಡಿದರೂ ನೆಮ್ಮದಿ ಇಲ್ಲ ನಿಮಗೆ. ಸುಮ್ಮನೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತೀರಿ ಎಂದು ಹೇಳಿದರು.
ಸಿಎಂ ಕುಮಾರಸ್ವಾಮಿ ಅಥವಾ ತಾವು ಅಸಂಸದೀಯ ಪದ ಬಳಕೆ ಮಾಡಿದರೆ ಸೂಚನೆ ಕೊಡುತ್ತೇವೆ. ನೀವು ಪ್ರತಿಭಟನೆ ಕೈಬಿಡಬೇಕು ಎಂದು ಯಡಿಯೂಪ್ಪ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಒಪ್ಪದೆ ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರಿಸಿದರು. ಗದ್ದಲ, ಧರಣಿ ಹಿನ್ನೆಲೆ ಮತ್ತೆ ಅರ್ಧಗಂಟೆ ಕಲಾಪವನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದರು. ಬಳಿಕವೂ ಪ್ರತಿಭಟನೆ ನಡೆಸಿದ್ದರಿಂದ ಮಧ್ಯಾಹ್ನ ಮೂರು ಗಂಟೆಗೆ ಕಲಾಪ ಮುಂದೂಡಿದರು. ಈ ವೇಳೆ ಸರ್ಕಾರ ಬುರುಡೆ ಬುರುಡೆ ಎಂದು ಬಿಜೆಪಿ ಶಾಸಕರು ಕೂಗುತ್ತ ಹೊರನಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv