ಬೆಂಗಳೂರು: ಕಾಂಗ್ರೆಸ್ (Congress) ಸುಳ್ಳು ಭರವಸೆ ಕೊಟ್ಟು, ನಾಟಕ ಮಾಡಿ ಅಧಿಕಾರಕ್ಕೆ ಬಂದಿದೆ. ಈಗ ಈ ಗ್ಯಾರಂಟಿಯನ್ನು (Congress Guarantee) ಪೂರ್ಣ ಜಾರಿ ಮಾಡದೇ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಇಂದು ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲದ ಸ್ಥಿತಿ ಇದೆ. ಹೀಗಾಗಿ ದೆಹಲಿ ಚಲೋ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸದ ದುಷ್ಟ ಸರ್ಕಾರ ಇದು. ಸರಿಯಾಗಿ ಅಧಿಕಾರ ನಡೆಸಲಾಗದೇ ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಿರ್ವಾಹನ ಮೇಲೆ ಮಹಿಳೆಯರಿಂದ ಹಲ್ಲೆ- ಹೊಸ ಮೊಬೈಲ್ ನೀಡಿ ಕ್ಷಮೆ ಕೇಳಿದ ಮಹಿಳೆಯ ಪತಿ
ಕೃಷ್ಣ ಮೇಲ್ದಂಡೆಗೆ ಇವರು ಒಂದು ರೂಪಾಯಿ ಕೊಟ್ಟಿಲ್ಲ. ಮತದಾರರ ಕಣ್ಣಿಗೆ ಮಣ್ಣೆರಚಿ ಅಧಿಕಾರಕ್ಕೆ ಬಂದಿದ್ದಾರೆ. ಇವರ ಮೇಕೆದಾಟು ಹೋರಾಟ, ದೆಹಲಿ ಚಲೋ ಕೇವಲ ನಾಟಕ. ಮಹದಾಯಿಗೆ ಇವರ ಬಳಿ ದುಡ್ಡಿಲ್ಲ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 7,800 ಕೋಟಿ ರೂ. ಬಿಡುಗಡೆ ಮಾಡಿದ ಹಣವನ್ನು ಇವರು ತಡೆದಿದ್ದಾರೆ. ಮುಂದಿನ ಲೋಕಸಭೆಯಲ್ಲಿ ಸೋಲಿಸಿ ಮನೆಗೆ ನಿಮ್ಮನ್ನು ಚಲೋ ಮಾಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.